ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸಂಭ್ರಮಾಚರಣೆಗೆಂದು ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಉದ್ಯಮಿಯೊಬ್ಬರ ಮನೆಯಲ್ಲಿ, ನಂಬಿಕಸ್ಥ ಕೆಲಸಗಾರರೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಐಷಾರಾಮಿ ವಾಚ್‌ಗಳನ್ನು ದೋಚಿರುವ ಆಘಾತಕಾರಿ ಘಟನೆ ನಗರದ ಸದಾಶಿವನಗರದಲ್ಲಿ ನಡೆದಿದೆ.
ಸದಾಶಿವನಗರದ ನಿವಾಸಿ ಉದ್ಯಮಿ ಅಭಿಷೇಕ್ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಹಾಜಿರ ಬೇಗಂ ಮತ್ತು ಆಕೆಯ ಪತಿ ಶಾಹೀರ್ ಎಂಬುವವರೇ ಈ ಕೃತ್ಯ ಎಸಗಿದ ಆರೋಪಿಗಳು. ಈ ದಂಪತಿ ಈ ಹಿಂದೆ 2022 ರಿಂದ 2024 ರವರೆಗೆ ಇದೇ ಮನೆಯಲ್ಲಿ ಕೆಲಸ ಮಾಡಿದ್ದರು. ಕೆಲಸ ಬಿಟ್ಟು ಹೋಗಿದ್ದ ಇವರು, ಇತ್ತೀಚೆಗಷ್ಟೇ ಅಂದರೆ ಡಿಸೆಂಬರ್ 27 ರಂದು ಪುನಃ ಕೆಲಸಕ್ಕೆ ಸೇರಿಕೊಂಡಿದ್ದರು. ಹಳೆಯ ಪರಿಚಯವಿದ್ದ ಕಾರಣ ಮಾಲೀಕರು ಇವರನ್ನು ನಂಬಿದ್ದರು.
ಡಿಸೆಂಬರ್ 30 ರಂದು ಅಭಿಷೇಕ್ ಕುಟುಂಬ ಹೊಸ ವರ್ಷದ ಆಚರಣೆಗಾಗಿ ತಮಿಳುನಾಡಿನ ಕೊಯಮತ್ತೂರಿಗೆ ತೆರಳಿತ್ತು. ಹೋಗುವ ಮುನ್ನ ಮನೆಯ ಕೀಲಿಯನ್ನು ತಮ್ಮ ಅತ್ತೆಗೆ ನೀಡುವಂತೆ ಹಾಜಿರಾ ಕೈಗೆ ಕೊಟ್ಟು ಹೋಗಿದ್ದರು. ಆದರೆ, ಈ ಅವಕಾಶವನ್ನೇ ಬಳಸಿಕೊಂಡ ದಂಪತಿ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಚಿನ್ನಾಭರಣ: ಸುಮಾರು 979 ಗ್ರಾಂ (ಮೌಲ್ಯ 1.27 ಕೋಟಿ)
ವಾಚ್‌ಗಳು: 10 ಲಕ್ಷ ಮೌಲ್ಯದ ಐಷಾರಾಮಿ ವಾಚ್‌ಗಳು
ಒಟ್ಟು ಮೊತ್ತ: ಸುಮಾರು 1.37 ಕೋಟಿ
ಸಂಜೆಯಾದರೂ ಹಾಜಿರಾ ದಂಪತಿ ಕೀಲಿಯನ್ನು ಅತ್ತೆಯ ಮನೆಗೆ ತಲುಪಿಸಿರಲಿಲ್ಲ. ಅನುಮಾನಗೊಂಡ ಅಭಿಷೇಕ್ ಕರೆ ಮಾಡಿದಾಗ ದಂಪತಿಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ತಕ್ಷಣವೇ ತಮ್ಮ ಕಾರಿನ ಚಾಲಕನನ್ನು ಮನೆಗೆ ಕಳುಹಿಸಿ ಪರಿಶೀಲಿಸಿದಾಗ, ಮನೆಯ ಕಬೋರ್ಡ್‌ಗಳನ್ನು ಒಡೆದು ಕಳ್ಳತನ ಮಾಡಿರುವುದು ಬಯಲಾಗಿದೆ.
ಸದ್ಯ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ದಂಪತಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

