ಹೊಸದಿಗಂತವರದಿ, ಪಿರಿಯಾಪಟ್ಟಣ:
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಇಡೀ ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳ ಆಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ಬುಧವಾರ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನ ಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ ೭೯ ಗ್ರಾಮಗಳಲ್ಲಿ ಬರುವ ೧೫೦ ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,೨೦೧೭ ರಲ್ಲಿ ನಾನು ಈ ಯೋಜನೆಗೆ ಮಂಜೂರು ಮಾಡಿ ಚಾಲನೆ ನೀಡಿದ್ದೆ. ಪಿರಿಯಾಪಟ್ಟಣ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ, ಈ ಯೋಜನೆಯಿಂದ ೧೫೦ ಕೆರೆಗಳಿಗೆ ನೀರು ತುಂಬಿಸುವುದರಿAದ ಅಂತರ್ಜಲ ಹೆಚ್ಚಳ ಆಗಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುತ್ತದೆ. ಇದರಿಂದ ೭೯ ಗ್ರಾಮಗಳ ೯೩ ಸಾವಿರ ಜನರಿಗೆ ಅನುಕೂಲ ಆಗುತ್ತದೆ ಎಂದರು.
ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ. ನಾವು ನೀರಾವರಿ ಯೋಜನೆಗೆ ಪ್ರತಿ ವರ್ಷ ೧೦ ಸಾವಿರ ಕೋಟಿ ಖರ್ಚು ಮಾಡುವುದಾಗಿ ವಾಗ್ದಾನ ಮಾಡಿದ್ದೆವು, ಅದರಂತೆ ೫ ವರ್ಷಗಳಲ್ಲಿ ೫೬ ಸಾವಿರ ಕೋಟಿ ಖರ್ಚು ಮಾಡಿದೆವು. ರಾಜ್ಯದ ೨೨೩ ತಾಲ್ಲೂಕುಗಳಲ್ಲಿ ಬರಗಾಲ ಇದೆ. ಆದರೂ ಜನರಿಗೆ ನೀರಿನ ಸಮಸ್ಯೆ ಆಗದಂತೆ ಕಾರ್ಯ ನಿರ್ವಹಿಸಿದ್ದೇವೆ. ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ ಆದರೆ ಇನ್ನೂ ಬರ ಪರಿಹಾರ ಬಿಡುಗಡೆ ಆಗಿಲ್ಲ ಎಂದು ತಿಳಿಸಿದರು.
ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರು ಒಂದು ಕುಟುಂಬದoತೆ ಇರಬೇಕು. ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ೫ ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ. ಈ ೫ ಗ್ಯಾರೆಂಟಿ ಗಳಿಗೆ ೩೮ ಸಾವಿರ ಕೋಟಿ ಹಾಗೂ ಮುಂದಿನ ವರ್ಷದಲ್ಲಿ ೫೮ ಸಾವಿರ ಕೋಟಿ ರೂಗಳನ್ನು ಖರ್ಚು ಮಾಡುತ್ತೇವೆ. ೪.೫ ಕೋಟಿ ಜನರಿಗೆ ಪ್ರತಿ ತಿಂಗಳು ೪ ರಿಂದ ೫ ಸಾವಿರ ಮೌಲ್ಯದ ಸೌಲಭ್ಯಗಳು ಸಿಗುತ್ತಿವೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಇಡೀ ದೇಶಕ್ಕೆ ಮಾದರಿಯಾದ ಸರ್ಕಾರವನ್ನು ರೂಪಿಸಿದ್ದೇವೆ. ಕೆರೆಗಳಿಗೆ ನೀರನ್ನು ತುಂಬಿಸಿ ಅಂತರ್ ಜಲ ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದೇವೆ. ರೈತರಿಗೆ ಯಾವುದೇ ಸಂಬಳ,ರಜೆ, ಪ್ರಮೋಷನ್,ಪಿಂಜಣಿ ಇಲ್ಲ. ಆದ್ದರಿಂದ ಅವರು ಬೆಳೆ ಬೆಳೆಯಲು ನೀರನ್ನು ನೀಡಿದರೆ ಉತ್ತಮ ಬೆಳೆಗಳನ್ನು ಬೆಳೆದು ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ. ನಮ್ಮ ಸರ್ಕಾರ ರೈತ ಪರವಾದ ಸರ್ಕಾರ. ನಾವು ಚುನಾವಣೆಗೂ ಮುಂಚೆ ನೀಡಿದ್ದ ೫ ಗ್ಯಾರೆಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆಸಿದ್ದೇವೆ.
ಇಂದು ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಪ್ರತಿ ಮನೆಗೆ ೨೦೦ ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ೧.೬ ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ೨೦೦೦ ರೂ ನೀಡಲಾಗುತ್ತಿದೆ. ಪ್ರತಿ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ೫ ಕೆ ಜಿ ಅಕ್ಕಿ ಹಾಗೂ ೫ ಕೆ ಜಿ ಅಕ್ಕಿಗೆ ಹಣವನ್ನು ನೀಡಲಾಗುತ್ತಿದೆ. ಪದವಿ ಓದಿರುವ ನಿರುದ್ಯೋಗಿ ವಿಧ್ಯಾರ್ಥಿಗಳಿಗೆ ಪ್ರತಿ ಮಾಹೆ ೩೦೦೦ ರೂ ಹಾಗೂ ಡಿಪ್ಲೋಮಾ ಮಾಡಿರುವವರಿಗೆ ಮಾಸಿಕ ೧೫೦೦ ರೂಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕನ್ನಡದಲ್ಲಿ ನಾಮಫಲಕಗಳನ್ನು ಹಾಕುವಂತೆ ಆದೇಶ ಮಾಡಲಾಗಿದೆ. ಮೇಕೆ ದಾಟು ಯೋಜನೆಯನ್ನು ಜಾರಿಗೆ ತರಲು ಪಾದಯಾತ್ರೆಯನ್ನು ಮಾಡಿದೆವು. ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇದೆ. ನಮ್ಮ ನೀರು ನಮ್ಮ ಹಕ್ಕು. ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಶು ಸಂಗೋಪನಾ ಇಲಾಖೆಯ ಸಚಿವ ಕೆ ವೆಂಕಟೇಶ್ ಮಾತನಾಡಿ, ೧೫೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ತಾಲ್ಲೂಕಿನ ಬರ ಕಡಿಮೆ ಆಗುತ್ತದೆ. ಈ ೧೫೦ ಕೆರೆಗಳಲ್ಲಿ ಹೂಳು ತುಂಬಿದ್ದು, ಹೂಳೆತ್ತಿ ಬಂಡು ನಿರ್ಮಾಣ ಮಾಡಬೇಕು. ಜನರ ಮನಸ್ಸನ್ನು ಅರ್ಥ ಮಾಡಿಕೊಂಡ ರಾಜಕಾರಣಿಗಳು ಮಾತ್ರ ಜನಪರ ಕಾರ್ಯಗಳನ್ನು ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಸರ್ಕಾರದ ಹಲವು ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಸಿ ಮಹದೇವಪ್ಪ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೋಸರಾಜು, ಶಾಸಕರಾದ ಕೆ ಹರೀಶ್ ಗೌಡ, ಡಿ ರವಿಶಂಕರ್, ಮಡಿಕೇರಿ ಶಾಸಕ ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಿ ತಿಮ್ಮಯ್ಯ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಗಾಯತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು