ಹೊಸದಿಗಂತ ವರದಿ, ಶಿವಮೊಗ್ಗ:
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಘರ್ ವಾಪ್ಸಿ ಆಗಿರುವುದರಿಂದ ಕಾಂಗ್ರೆಸ್ ಗೆ ಯಾವುದೇ ನಷ್ಟವಿಲ್ಲ. ಲೋಕಸಭೆ ಚುನಾವಣೆ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ, ಐಟಿ ಸೇರಿ ಹೆದರಿಸುವ ಕೆಟ್ಟ ಚಟ ಬಿಜೆಪಿಯವರಿಗಿದೆ. ಆ ರೀತಿ ಯಾವುದೊ ಒತ್ತಡ ತಂದು ವಾಪಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರಬಹುದು. ಯಾವ ಒತ್ತಡವಿತ್ತು ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.
ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬರುವಾಗ ಶೆಟ್ಟರ್ ಅವರಿಗೆ ಕಾಂಗ್ರೆಸ್ ಎಲ್ಲ ರೀತಿಯ ಗೌರವ ನೀಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಎಂಎಲ್ ಸಿ ಮಾಡಿ ಗೌರವಯುತವಾಗಿ ನಡೆಸಿಕೊಳ್ಳಲಾಗಿದೆ. ಮಾಜಿ ಸಿಎಂ ಆಗಿರುವ ಅವರು ನನಗಿಂತ ಹಿರಿಯರಿದ್ದಾರೆ. ಹಾಗಾಗಿ ಅವರ ಬಗ್ಗೆ ಮಾತನಾಡುವುದು, ಟೀಕೆ ಮಾಡುವುದಿಲ್ಲ ಎಂದರು.