ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲ್ಡೀವ್ಸ್ ಅಧ್ಯಕ್ಷ ಮುಯಿಝಿಯ ಭಾರತ ವಿರೋಧಿ ನಡೆಯಿಂದ ಸರಕಾರ ಪತನದ ಹಂತ ತಲುಪಿದ್ದು, ಇದರ ನಡುವೆ ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಭಾರಿ ಇಳಿಕೆಯಾಗಿದೆ.
ಇದುವರೆಗೆ ಮಾಲ್ಡೀವ್ಸ್ಗೆ ಭೇಟಿ ನೀಡುವ ಗರಿಷ್ಠ ಪ್ರವಾಸಿಗರ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿತ್ತು. ಆದರೆ ಪ್ರಧಾನಿ ಮೋದಿ ಹಾಗೂ ಭಾರತೀಯರನ್ನು ನಿಂದಿಸಿದ ಬಳಿಕ ಪ್ರವಾಸಿಗರ ಸಂಖ್ಯೆ ಇಳಿಕೆಯಾಗುತ್ತಲೇ ಹೋಗಿದೆ. ಕಳೆದ 3 ವಾರಗಳ ಅಂಕಿ ಅಂಶವನ್ನು ಮಾಲ್ಡೀವ್ಸ್ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮಾಲ್ಡೀವ್ಸ್ಗೆ ಗರಿಷ್ಠ ಪ್ರವಾಸಿಗರು ಭೇಟಿ ನೀಡುವ ರಾಷ್ಟ್ರಗಳಲ್ಲಿ ಭಾರತ 3ರಿಂದ 5ನೇ ಸ್ಥಾನಕ್ಕೆ ಕುಸಿದಿದೆ.
ಜನವರಿ ತಿಂಗಳಲ್ಲಿ ಮಾಲ್ಡೀವ್ಸ್ ಪ್ರವಾಸ ಮಾಡಿದವರ ಒಟ್ಟು ಸಂಖ್ಯೆ 174,400. ಈ ಪೈಕಿ ಭಾರತೀಯರ ಸಂಖ್ಯೆ 13,989. ಶೇಕಡಾ 8 ರಷ್ಟು ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತವಾಗಿದೆ. ರಷ್ಯಾ, ಇಟಲಿ, ಚೀನಾ ಹಾಗೂ ಲಂಡನ್ ಆರಂಭಿಕ ಸ್ಥಾನಗಳನ್ನು ಪಡೆದಿದೆ. ಜನವರಿ ಮೂರು ವಾರಗಳಲ್ಲಿ 18,561 ರಷ್ಯಾ ಪ್ರವಾಸಿಗರು ಮಾಲ್ಡೀವ್ಸ್ ಭೇಟಿ ನೀಡಿದ್ದಾರೆ. ಇನ್ನು ಇಟಲಿಯ 18,111, ಚೀನಾದ 16,529 ಹಾಗೂ ಯುಕೆಯಿಂದ 14,588 ಪ್ರವಾಸಿಗರು ಮಾಲ್ಡೀವ್ಸ್ ಭೇಟಿ ನೀಡಿದ್ದಾರೆ.
2023ರಲ್ಲಿ ಭಾರತದ 209,193 ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಮಾಡಿದ್ದರು. ಇನ್ನು 2022ರಲ್ಲಿ 2.41 ಲಕ್ಷ ಹಾಗೂ 2021ರಲ್ಲಿ 2.91 ಲಕ್ಷ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಮಾಡಿದ್ದರು. ಈ ಮೂಲಕ ಗರಿಷ್ಠ ಪ್ರವಾಸಿಗರ ಸಂಖ್ಯೆಯಲ್ಲಿ ಮುಂಚೂಣಿ ಸ್ಥಾನ ಪಡೆದಿತ್ತು. ಮಾಲ್ಡೀವ್ಸ್ನಿಂದ ಭಾರತೀಯ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಿ ಎಂದು ಭಾರತಕ್ಕೆ ತಾಕೀತು ಮಾಡುತ್ತಾ ಅಧಿಕಾರಕ್ಕೆ ಬಂದ ಅಧ್ಯಕ್ಷ ಮುಯಿಝಿ, ಚೀನಾ ಪರ ವಾಲಿದ್ದರು. ಇದಕ್ಕೆ ಮಾಲ್ಡೀವ್ಸ್ನಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾರತದ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಉತ್ತೇಜಿಸಿದ್ದರು.