ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ದಿನಗಳನ್ನು ಆಧ್ಯಾತ್ಮಿಕ ಚಿಂತನೆಯೊಂದಿಗೆ ಆರಂಭಿಸುವ ಪರಂಪರೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತೊಮ್ಮೆ ಪಾಲಿಸಿದ್ದಾರೆ. ಗುಜರಾತ್‌ನ ಐತಿಹಾಸಿಕ ಸೋಮನಾಥ ಮಹಾದೇವ ದೇವಾಲಯಕ್ಕೆ ಅವರು ಪತ್ನಿ ನೀತಾ ಅಂಬಾನಿ ಹಾಗೂ ಪುತ್ರ ಅನಂತ್ ಅಂಬಾನಿ ಅವರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿ ವರ್ಷದ ಆರಂಭದಲ್ಲಿ ಸೋಮನಾಥನ ದರುಶನ ಪಡೆದು ಆಶೀರ್ವಾದ ಪಡೆಯುವುದು ಅಂಬಾನಿ ಕುಟುಂಬದ ದೀರ್ಘಕಾಲದ ಆಚರಣೆಯಾಗಿದೆ. ಈ ಬಾರಿ ಕೂಡ ದೇವಾಲಯದಲ್ಲಿ ದರುಶನ ಪಡೆದ ಬಳಿಕ ಸೋಮೇಶ್ವರ ಮಹಾ ಪೂಜೆ ಹಾಗೂ ಧ್ವಜ ಪೂಜೆಯಲ್ಲಿ ಕುಟುಂಬ ಭಾಗವಹಿಸಿತು. ಅಂಬಾನಿ ಕುಟುಂಬದ ಭೇಟಿಯನ್ನು ಗಮನದಲ್ಲಿಟ್ಟುಕೊಂಡು ದೇವಾಲಯ ಸಂಕೀರ್ಣ ಹಾಗೂ ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ದೇವಾಲಯಕ್ಕೆ ಆಗಮಿಸಿದ ಸಂದರ್ಭದ ದೃಶ್ಯಗಳನ್ನು ಸುದ್ದಿ ಸಂಸ್ಥೆ ANI ಹಂಚಿಕೊಂಡಿದ್ದು, ಬಿಗಿ ಭದ್ರತೆಯ ಮಧ್ಯೆ ಪೂಜೆ ಸಲ್ಲಿಸುತ್ತಿರುವ ಅಂಬಾನಿ ಕುಟುಂಬದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

