Friday, January 9, 2026

ಅಡ್ರೆಸ್‌ ಕೇಳುವ ನೆಪದಲ್ಲಿ ವೈದ್ಯೆ ಜತೆ ಅಸಭ್ಯ ವರ್ತನೆ, ಕಾಮುಕ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಖಾಸಗಿ ಆಸ್ಪತ್ರೆ ವೈದ್ಯೆ ಜೊತೆ ಅಸಭ್ಯ ವರ್ತನೆ ತೋರಿ ಕಿರುಕುಳಕ್ಕೆ ಯತ್ನಿಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕಬಾಣಾವಾರದ ಎಜಿಬಿ ಲೇಔಟ್‌ನಲ್ಲಿ ಘಟನೆ ನಡೆದಿತ್ತು. ತಡರಾತ್ರಿ 12:49 ಸಮಯದಲ್ಲಿ ಕೆಲಸ ಮುಗಿಸಿ ವೈದ್ಯೆ ಪಿಜಿಗೆ ಮರಳುತ್ತಿದ್ದರು. ಪಿಜಿ ಗೇಟ್ ಮುಂದೆ ನಿಂತಾಗ, ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಹಿಂದೆಯಿಂದ ಬಂದು ಯುವತಿಯನ್ನು ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ.

ಕಾಮುಕನ ಕಾಟ ಕಂಡು ವೈದ್ಯೆ ಕಿರುಚಾಡಲು ಪ್ರಾರಂಭಿಸಿದಾಗ ಅಪರಿಚಿತ ಬೈಕ್‌ನಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದ. ಕಳೆದ 20 ದಿನಗಳ ಹಿಂದೆ ಘಟನೆ ನಡೆದಿದ್ದು, ಬೀದಿ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ವಾಯವ್ಯ ವಿಭಾಗ ಡಿಸಿಪಿ ನಾಗೇಶ್ ಮಾತನಾಡಿ, ಪ್ರಕರಣ ಸಂಬಂಧ ಆರೋಪಿ ರಾಕೇಶ್‌ನನ್ನು ಬಂಧಿಸಲಾಗಿದೆ. ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಬಂದಿದ್ದ. ವಿಳಾಸ ಕೇಳುವ ನೆಪದಲ್ಲಿ ವೈದ್ಯೆ ಜೊತೆ ಅನುಚಿತ ವರ್ತನೆ ತೋರಿದ್ದ.

ತಡರಾತ್ರಿ ಡ್ಯೂಟಿ ಮುಗಿಸಿ ಆಟೋದಲ್ಲಿ ವೈದ್ಯೆ ಪಿಜಿಗೆ ಮರಳುತ್ತಿದ್ದರು. ಈ ವೇಳೆ ಆಕೆ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಆರೋಪಿ ರಾಕೇಶ್ 21 ವರ್ಷದ ಯುವಕ. ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ ಎಂದು ತಿಳಿದುಬಂದಿದೆ.

error: Content is protected !!