ಪತ್ನಿ ಮಾತಿನಿಂದ ನನ್ನನ್ನು ಏಕಾಂಗಿ ಮಾಡಿದ: ತಂದೆಯ ಆರೋಪಕ್ಕೆ ಉತ್ತರ ಕೊಟ್ಟ ಜಡೇಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ.

ಫೆಬ್ರವರಿ 8 ಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು 15 ವರ್ಷ ಪೂರೈಸಿದ ಸಂತಸದಲ್ಲಿದ್ದ ರವೀಂದ್ರ ಜಡೇಜಾ (Ravindra Jadeja) ಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ.

ರವಿಂದ್ರ ಜಡೇಜಾನನ್ನು ಕ್ರಿಕೆಟಿಗನಾಗಿ ಮಾಡಿದೆ. ಆದರೆ ಆತನಿಗೆ ರಿವಾಬಾ ಜೊತೆ ಮದುವೆ ಮಾಡಿಸಬಾರದಿತ್ತು. ಇದೀಗ ಜಡೇಜಾ ಪತ್ನಿ ಮಾತು ಕೇಳಿ ನನ್ನನ್ನುತೊರೆದಿದ್ದಾನೆ. ಈ ವಯಸ್ಸಿನಲ್ಲಿ ನಾನು ಏಕಾಂಗಿಯಾಗಿದ್ದೇನೆ ಎಂದು ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ತಂದೆ ಅನಿರುದ್ಧ್ ಸಿನ್ಹ ಗಂಭೀರ ಆರೋಪ ಕೋಲಾಹಲ ಸೃಷ್ಟಿಸಿದೆ.

ಇದು ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ಹಾಗೂ ರವೀಂದ್ರ ಜಡೇಜಾ ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ವಾಸ್ತವವಾಗಿ ಸ್ಥಳೀಯ ಮಾಧ್ಯಮದೊಂದಿಗೆ ತನ್ನ ಅಳಲನ್ನು ತೊಡಿಕೊಂಡಿರುವ ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಜಡೇಜಾ (Anirudh Singh Jadeja), ಮಗ ಹಾಗೂ ಸೊಸೆಯ ವಿರುದ್ಧ ಹರಿಹಾಯ್ದಿದ್ದಾರೆ. ಅದರಲ್ಲೂ ಜಡೇಜಾ ಪತ್ನಿ ರಿವಾಬ (Rivaba) ಅವರ ವಿರುದ್ಧ ಕಟುವಾದ ಭಾಷೆ ಬಳಸಿರುವ ಅವರು ನನ್ನ ಸೊಸೆ ಮನೆ ಒಡೆಯುವ ಕೆಲಸ ಮಾಡಿದ್ದಾಳೆ. ರಿವಾಬ ಏನು ಮ್ಯಾಜಿಕ್ ಮಾಡಿದಳೋ ಗೊತ್ತಿಲ್ಲ. ನನ್ನ ಮಗ ನನ್ನಿಂದ ದೂರಾಗಿ ವರ್ಷಗಳೇ ಕಳೆದಿವೆ ಎಂದು ಆರೋಪಿಸಿದ್ದಾರೆ.

ಸಂದರ್ಶನದಲ್ಲಿ ರವೀಂದ್ರ ಜಡೇಜಾ ತಂದೆ ಅನಿರುದ್ಧ್ ಸಿನ್ಹ ತಮ್ಮ ಕೌಟುಂಬಿಕ ವಿಚಾರಗಳ ಕುರಿತು ಮಾತನಾಡಿದ್ದಾರೆ. ನಾನು ಒಂದು ವಿಚಾರವನ್ನು ಇಲ್ಲಿ ಹೇಳಬಯಸುತ್ತೇನೆ. ನಾನು ನನ್ನ ಪುತ್ರ ರವೀಂದ್ರ ಜಡೇಜಾ, ಸೊಸೆ ರಿವಾಬ ಜೊತೆ ಯಾವುದೇ ಮಾತುಕತೆ ಇಲ್ಲ. ನಾನು ಅವರಿಗೆ ಫೋನ್ ಕರೆ ಮಾಡುವುದಿಲ್ಲ. ಅವರೂ ಮಾಡುತ್ತಿಲ್ಲ. 2016ರಲ್ಲಿ ರವೀಂದ್ರ ಜಡೇಜಾ ,ರಿವಾಬಾ ಮದುವೆಯಾದ ಕೆಲವೇ ತಿಂಗಳಲ್ಲಿ ಸಮಸ್ಯೆ ಆರಂಭಗೊಂಡಿದೆ. ಅಲ್ಲೀವರೆಗೆ ಉತ್ತಮ ಸಂಬಂಧವಿತ್ತು. ಆದರೆ ಪತ್ನಿ ಮಾತು ಕೇಳಿ ನನ್ನ ಜೊತೆ ಮಗ ಮಾತನಾಡುತ್ತಿಲ್ಲ ಎಂದು ಕ್ರಿಕೆಟಿಗನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಆತನಿಗೆ ನಾನು ಮದುವೆ ಮಾಡಿಸಬಾರದಿತ್ತು, ಆತನನ್ನು ಕ್ರಿಕೆಟಿಗ ಮಾಡದಿದ್ದರೆ ನನ್ನ ಬದುಕು ಚೆನ್ನಾಗಿರುತ್ತಿತ್ತು. ಮದುವೆಯಾದ ಮೂರೇ ತಿಂಗಳಿಗೆ ರಿವಾಬ ನನ್ನಲ್ಲಿ ಎಲ್ಲಾ ಆಸ್ತಿಗಳನ್ನು ಆಕೆಯ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿದ್ದಳು. ರಿವಾಬಾ ಆಗಮನದ ಬಳಿಕ ನಮ್ಮ ಕುಟುಂಬದಲ್ಲಿ ಜಗಳ ಶುರುವಾಯಿತು. ನನ್ನ ಪುತ್ರಿ ಆರೋಪಗಳು ಈಗಾಗಲೇ ಸುದ್ದಿಯಾಗಿತ್ತು. ಜಡೇಜಾ ತಂಗಿಯ ಆರೋಪವನ್ನು ನೀವು ಕಡೆಗಣಿಸಬಹುದು, ಆದರೆ ನಮ್ಮ ಕುಟುಂಬದ ಸುಮಾರು 50 ರಷ್ಟು ಮಂದಿ ಜಡೇಜಾ ಹಾಗೂ ರಿವಾಬಾ ಜೊತೆ ಮಾತುಕತೆ ಇಲ್ಲ. ನಾನು, ನನ್ನಪುತ್ರಿ ತಪ್ಪಾಗಿರಬಹುದು. ಆದರೆ ಕುಟುಂಬ 50ಕ್ಕೂ ಹೆಚ್ಚು ಮಂದಿಗೆ ಇದೇ ಸಮಸ್ಯೆ ಎಂದರೆ ತಪ್ಪು ಯಾರದ್ದು? ಎಂದು ಅನಿರುದ್ಧ ಸಿನ್ಹ ಪ್ರಶ್ನಿಸಿದ್ದಾರೆ.

5 ವರ್ಷದಿಂದ ನಾನು ನನ್ನ ಮೊಮ್ಮಗಳ ಮುಖ ನೋಡಿಲ್ಲ. ರವೀಂದ್ರ ಜಡೇಜಾ ಅತ್ತೆ ಮಾವ ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ. ಈ ವಯಸ್ಸಿನಲ್ಲಿ ನಾವು ಏಕಾಂಗಿಯಾಗಿದ್ದೇವೆ. ಪತ್ನಿಯ ಮಾತಿನಿಂದ ಮಗ ನಮ್ಮನ್ನು ತೊರೆದಿದ್ದಾನೆ ಎಂದು ಅನಿರುದ್ಧ ಸಿನ್ಹ ಸಂದರ್ಶನದಲ್ಲಿ ಹೇಳಿದ್ದಾರೆ.

ಜಡೇಜಾ ನೀಡಿದ ಪ್ರತಿಕ್ರಿಯೆ
ತಂದೆ ಮಾಡಿರುವ ಆರೋಪಗಳಿಗೆಲ್ಲ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್​ನಲ್ಲಿ ಸ್ಪಷ್ಟನೆ ನೀಡಿರುವ ಜಡೇಜಾ, ಈ ಆರೋಪಗಳೆಲ್ಲ ಪೂರ್ವ ನಿಯೋಜಿತ ಪಿತೂರಿ. ಅವರು ಹೊರಿಸಿರುವ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲವೂ ಸತ್ಯಕ್ಕೆ ದೂರವಾದ್ದವು. ಇದೆಲ್ಲ ನನ್ನ ಪತ್ನಿಯ ಹೆಸರಿಗೆ ಕಳಂಕ ತರುವ ಪ್ರಯತ್ನವಾಗಿದೆ. ಇದೆಲ್ಲವನ್ನು ನಾನು ಖಂಡಿಸುತ್ತೇನೆ. ನನಗೂ ಹೇಳಲಿಕ್ಕೆ ಸಾಕಷ್ಟಿದೆ. ಆದರೆ ನಾನು ಅದೆಲ್ಲವನ್ನು ಸಾರ್ವಜನಿಕವಾಗಿ ಬಿಚ್ಚಿಡಲು ಬಯಸುವುದಿಲ್ಲ ಎಂದು ಜಡೇಜಾ ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!