ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ನಾಯಕರ ದಂಡು ದೆಹಲಿಯತ್ತ ಹೆಜ್ಜೆ ಇಡುತ್ತಿದ್ದು, ಇದೀಗ ಬಿಜೆಪಿ (BJP) ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಶುಕ್ರವಾರ ದೆಹಲಿಯಲ್ಲಿ ಪಕ್ಷ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಭೇಟಿಯಾಗಿ ಮಾತುಕತೆ ನಡೆಸಿದರು.
ಲೋಕಸಭೆ ಚುನಾವಣೆಗೆ ಸಿದ್ಧತೆ ಭರದಿಂದ ಸಾಗುತ್ತಿರುವ ನಡುವೆಯೇ ವಿಜಯೇಂದ್ರ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದ ಬೆಳವಣಿಗೆ ಬಗ್ಗೆ ಜೆ.ಪಿ.ನಡ್ಡಾ ಜೊತೆ ಚರ್ಚೆ ಮಾಡಿದೆ. ವಿಧಾನ ಪರಿಷತ್, ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಿದೆ. ಜೆ.ಪಿ.ನಡ್ಡಾ ನನ್ನ ಕಾರ್ಯವೈಖರಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ದಾಖಲೆ ಬರೆಯಲಿದ್ದೇವೆ ಎಂದು ಭರವಸೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ಸೋಮಣ್ಣಗೆ ರಾಜ್ಯಸಭೆ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿದ ಅವರು, ಎಲ್ಲವೂ ಚರ್ಚೆಯಾಗಿದೆ, ನಮ್ಮ ವರಿಷ್ಠರು ತಿರ್ಮಾನ ಮಾಡುತ್ತಾರೆ. ನಾಡಿದ್ದು ಅಮಿತ್ ಶಾ ಮೈಸೂರಿಗೆ ಬಂದಾಗ ಚರ್ಚೆಯಾಗಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ವೇಳೆ ಶಾಸಕ ಯತ್ನಾಳ್ ಭೇಟಿಯಾಗಿದೆ. ಇದಕ್ಕೆ ವಿಶೇಷ ಒತ್ತು ಕೊಡುವ ಅಗತ್ಯ ಇಲ್ಲ. ಸುಮಲತಾ ಪ್ರಧಾನಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಾಡಿದ್ದು ಅಮಿತ್ ಶಾ ಅವರು ಮೈಸೂರಿಗೆ ಬಂದಾಗ ಚರ್ಚೆಯಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನರಿಗೆ ಕೊಟ್ಟ ಭರವಸೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಲೋಪದೋಷ ಮುಚ್ಚಿ ಹಾಕಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡಲಾಗಿದೆ. ಇದು ಸಿಎಂ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಜೋಶಿ ಭೇಟಿಯಾದ ವಿಜಯೇಂದ್ರ, ಯತ್ನಾಳ್, ರಮೇಶ್ ಜಾರಕಿಹೊಳಿ
ಸಂಸತ್ ಭವನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನೂ ವಿಜಯೇಂದ್ರ ಭೆಟಿಯಾದರು. ಇದೇ ವೇಳೆ, ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಸಂಸದರಾದ ಪಿಸಿ ಗದ್ದಿಗೌಡರ್, ಪಿಸಿ ಮೋಹನ್ ಕೂಡ ಉಪಸ್ಥಿತರಿದ್ದರು.
ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರು ಹಾಗೂ ಹಿರಿಯರಾದ ಪ್ರಲ್ಹಾದ್ ಜೋಶಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಚರ್ಚಿಸಿ ಮಾಹಿತಿ ಒದಗಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ಸಂಸದರು, ಮಾಜಿ ಸಂಸದರು ಹಾಗೂ ಮಾಜಿ ಸಚಿವರುಗಳು ಉಪಸ್ಥಿತರಿದ್ದರು ಎಂದು ವಿಜಯೇಂದ್ರ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.