ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡನ ನೈನಿತಾಲ್ ಜಿಲ್ಲೆಯ ಹಲ್ದವಾನಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಭಿನವ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎ.ಪಿ. ಅನ್ಶುಮನ್ ಅವರೊಂದಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಪೊಲೀಸರ ಮೇಲೆ ದಾಳಿ ಮಾಡಿದ ಹಾಗೂ ಬಂಭೂಲ್ಪುರದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಧ್ವಂಸಗೊಳಿಸಿ ಪುಂಡಾಟಿಕೆ ಮೆರೆದವರ ವಿರುದ್ಧ ಎನ್‌ಎಸ್‌ಎ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಕರ್ಫ್ಯೂ ಜಾರಿಗೊಳಿಸುವ ಮೂಲಕ ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೆ, ಮುಂದಿನ 24 ಗಂಟೆಗಳಲ್ಲಿ ಪಟ್ಟಣವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗಿದೆ ಎಂದು ಅಭಿನವ್ ಕುಮಾರ್ ಹೇಳಿದ್ದಾರೆ.