ಹೊಸದಿಗಂತ ವರದಿ, ಚಿತ್ರದುರ್ಗ:
ಫ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ಸರ್ಕಾರಿ ಆಸ್ಪತ್ರೆಯನ್ನು ಬಳಸಿಕೊಂಡ ವೈದ್ಯನನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಡಿ.ಆರ್.ಅಭಿಷೇಕ್ ಅಮಾನತ್ತಾಗಿರುವ ವೈದ್ಯ.
ಇವರು ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.
ಇತ್ತೀಚೆಗೆ ಇವರ ಮದುವೆ ನಿಶ್ಚಯವಾಗಿದ್ದು, ಅದಕ್ಕಾಗಿ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆಸಿದ್ದರು. ಅದರಂತೆ ಫೆ.೭ ರಂದು ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ರೋಗಿಯೊಬ್ಬರಿಗೆ ಶಸ್ತ್ರಕ್ರಿಯೆ ನಡೆಸುವಂತೆ ಫೋಟೋ ಶೋಟ್ ಮಾಡಿಸಿದ್ದರು.
ಇವರ ಫೋಟೋ ಶೂಟ್ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಸುದ್ದಿ ಮಾದ್ಯಮಗಳಲ್ಲಿ ಬಿತ್ತರವಾಗಿದ್ದವು. ವೈದ್ಯರು ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಫೀ ವೆಡ್ಡಿಂಗ್ ಫೋಟೋ ಶೂಟ್‌ಗೆ ಬಳಸಿಕೊಂಡ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಘಟನೆಗೆ ಸಂಬಂಧಿಸಿದ ವೈದ್ಯನನ್ನು ಅಮಾನತು ಮಾಡಿ ಆದೇಶ ಹೊರಿಡಿಸಿದ್ದಾರೆ.