ಹೊಸದಿಗಂತ , ಬೆಂಗಳೂರು:
ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಕೆ.ಗೊಲ್ಲಹಳ್ಳಿ ನಿವಾಸಿ ಮಂಜುಳಾ (40) ಎಂಬುವರು ಕ್ಯಾಂಟರ್ ವಾಹನ ಚಕ್ರಗಳು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್ ಚಾಲಕ ಜಾನಕಿರಾಮನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ತಮ್ಮ ದ್ವಿಚಕ್ರ ವಾಹನದಲ್ಲಿ ಉತ್ತರಹಳ್ಳಿ ಕಡೆಯಿಂದ ಮೈಸೂರು ಮುಖ್ಯರಸ್ತೆ ಕಡೆಗೆ ಹೋಗುತ್ತಿದ್ದ ಮಂಜುಳಾ ಅವರು, ಮಾರ್ಗ ಮಧ್ಯೆ ಸಾವನ ದರ್ಬಾರ ಆಶ್ರಮದ ಹತ್ತಿರ ತಿರುವು ಪಡೆಯುವಾಗ, ಅದೇ ಸಮಯದಲ್ಲಿ ಅತೀ ವೇಗ ಬರುತ್ತಿದ್ದ I ಕ್ಯಾಂಟರ್, ಮಂಜುಳಾ ಅವರ ದ್ವಿಚಕ್ರ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಇದರ ಪರಿಣಾಮ ಕೆಳಗೆ ಬಿದ್ದಿದ್ದಾರೆ. ಆಗ ಅವರ ಮೇಲೆಯೇ ಕ್ಯಾಂಟರ್ನ ಚಕ್ರಗಳು ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಲಾಗಿದೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿ ಕಾರ್ಮಿಕ ಸಾವು:
ಮತ್ತೊಂದು ಪ್ರಕರಣದಲ್ಲಿ ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಾಗಿ ಒಬ್ಬ ದ್ವಿಚಕ್ರ ಸವಾರ ಮೃತಪಟ್ಟಿದ್ದಾನೆ.
ಚನ್ನೇನಹಳ್ಳಿ ನಿವಾಸಿ ನಾರಾಯಣಸ್ವಾಮಿ (39) ಮೃತ ದ್ವಿಚಕ್ರ ಸವಾರ, ಘಟನೆಯಲ್ಲಿ ಮತ್ತೊಂದು ದ್ವಿಚಕ್ರ ಸವಾರ ರಾಜಕುಮಾರ್ (40) ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.
ಕೂಲಿಕಾರ್ಮಿಕನಾಗಿದ್ದನಾರಾಯಣಸ್ವಾಮಿ ಫೆ 16ರಂದು ರಾತ್ರಿ 7 ಗಂಟೆ ಸುಮಾರಿಗೆ ಚನ್ನೇನಹಳ್ಳಿ ಸಮೀಪದ ಕೆರೆ ರಸ್ತೆಯಲ್ಲಿ ಹೋಗುತ್ತಿದ್ದರು. ಅದೇ ಸಮಯದಲ್ಲಿ ಎದುರು ಬರುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನದಲ್ಲಿ ರಾಜಕುಮಾರ್ ಬರುತ್ತಿದ್ದನು. ಈ ವೇಳೆ ಇಬ್ಬರು ಆಯಾತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ.
ಇದರ ಸಂಬಂಧ ನಾರಾಯಣಸ್ವಾಮಿಗೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.