ಕಾವೇರಿದ ’ಜೆರೋಸಾ’ ಪ್ರಕರಣ: ಪ್ರತಿಭಟನಾ ನಿರತ ವಿಹಿಂಪ, ಬಜರಂಗದಳ ಕಾರ್ಯಕರ್ತರ ಬಂಧನ

ಹೊಸದಿಗಂತ ಮಂಗಳೂರು:

ಮಂಗಳೂರು ನಗರದ ವೆಲೆನ್ಸಿಯಾ ಜೆರೋಸಾ ಶಾಲೆಯ ಶಿಕ್ಷಕಿ ಹಿಂದು ಧರ್ಮದ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ವಿಶ್ವಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹಾಗೂ ಇಬ್ಬರು ಕಾರ್ಪೋರೇಟರ್‌ಗಳ ಮೇಲೆ ದಾಖಲಿಸಿದ ಪ್ರಕರಣ ವಾಸಪ್ ಪಡೆಯಬೇಕು, ಶಿಕ್ಷಕಿ ಪ್ರಭಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದ ವಿಶ್ವಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಆರಂಭದಲ್ಲಿ ಕ್ಲಾಕ್ ಟವರ್ ಬಳಿ ರಸ್ತೆಗೆ ಅಡ್ಡಲಾಗಿ ನಿಂತು ಕಾರ್ಯಕರ್ತರು ನಿಂತು ರಾಜ್ಯ ಸರಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ಬಳಿಕ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸುವುದಾಗಿ ತಿಳಿಸಿ ಮೆರವಣಿಗೆಯಲ್ಲಿ ತೆರಳಲು ಮುಂದಾದಾಗ ಪೊಲೀಸರು ತಡೆದರು. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಕಾರ್ಯಕರ್ತರು ಬ್ಯಾರೀಕೇಡ್‌ಗಳನ್ನು ಸರಿಸಿ ಮುನ್ನುಗ್ಗಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು. ಕೆಲವರು ರಸ್ತೆಯ ಮೇಲೆ ಮಲಗಿ ಜೈಶ್ರೀರಾಮ್ ಘೋಷಣೆ ಕೂಗಿದರು. ಪೊಲೀಸರು ಅವರನ್ನು ವಶಕ್ಕೆ ಪಡೆದರು. ನಾಲ್ಕು ವ್ಯಾನ್, ನಾಲ್ಕೈದು ಜೀಪ್‌ಗಳಲ್ಲಿ ಕೂರಿಸಿ ಕರೆದೊಯ್ದರು. ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಕಾರ್ಯದರ್ಶಿ ಶಿವಾನಂದ ಮೆಂಡನ್ ಭಾಗವಹಿಸಿದ್ದರು.


ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲು ತೆರಳುತ್ತಿದ್ದ ವಿಹಿಂಪ, ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿರುವ ಜಿಲ್ಲಾಡಳಿತ, ಪೊಲೀಸರ ಕ್ರಮವನ್ನು ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಖಂಡಿಸಿದ್ದಾರೆ. ಶಿಕ್ಷಕಿ ಪ್ರಭಾ ಅವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!