ಹೊಸದಿಗಂತ ವರದಿ ಮಂಗಳೂರು:
ಮಂಗಳೂರಿನಲ್ಲಿ ಮತ್ತೆ ಟಿಪ್ಪು ಹೆಸರು ಸದ್ದು ಮಾಡಿದೆ. ಫೆ.25 ರಿಂದ ನಗರದ ಹೊರವಲಯದ ತೊಕ್ಕೊಟ್ಟಿನಲ್ಲಿ ನಡೆಯಲಿರುವ ಡಿವೈಎಫ್ ಐ 12 ನೇ ರಾಜ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಉಳ್ಳಾಲ ವ್ಯಾಪ್ತಿಯ ರಸ್ತೆಯ ಇಕ್ಕೆಲಗಳಲ್ಲಿ ಬಂಟಿಂಗ್ ಬ್ಯಾನರ್ ಗಳನ್ನು ಅಳವಡಿಸಲಾಗಿದ್ದು, ಈ ನಡುವೆ ಹರೇಕಳದಲ್ಲಿ ಟಿಪ್ಪುವಿನ ಬೃಹತ್ ಬ್ಯಾನರ್ ಕೂಡ ಅಳವಡಿಸಲಾಗಿದೆ. ಯಾವುದೇ ಅನುಮತಿ ಪಡೆಯದೆ ಕಟೌಟ್ ಅಳವಡಿಸಿದ್ದರಿಂದ ಪೊಲೀಸರು ಶನಿವಾರ ಸಂಘಟಕರಿಗೆ ನೋಟೀಸ್ ನೀಡಿದ್ದಾರೆ. ಆದರೆ ಸಂಘಟಕರು ಇದನ್ನು ಕ್ಯಾರೇ ಮಾಡಿಲ್ಲ.
ಹರೇಕಳದ ಡಿವೈಎಫ್ ಐ ಕಚೇರಿ ಬಳಿಯಲ್ಲೇ ಸಂಘಟನೆ ಕಾರ್ಯಕರ್ತರು ಟಿಪ್ಪು ಸುಲ್ತಾನ್ ನ ಕಾರ್ಡ್ ಬೋರ್ಡ್ ಪ್ರತಿಮೆ ಅಳವಡಿಸಿದ್ದಾರೆ. ನೊಟೀಸ್ ನೀಡಿದರೂ ತೆರವುಗೊಳಿಸದೇ ಇರುವುದರಿಂದ ಸ್ವತಃ ಪೊಲೀಸರು ಕಟೌಟ್ ತೆರವುಗೊಳಿಸಲು ಸೋಮವಾರ ಮುಂದಾದಾಗ ಡಿವೈಎಫ್ ಐ ಮುಖಂಡರು ತಡೆಯೊಡ್ಡಿದ್ದಾರೆ. ಬಳಿಕ ಸ್ಥಳೀಯ ಪಂಚಾಯತ್ ನಿಂದ ಅನುಮತಿ ಪಡೆಯುತ್ತೇವೆ ಎಂದು ಪೊಲೀಸರಿಗೆ ತಿಳಿಸಿ ಪಂಚಾಯತ್ ಗೆ ತೆರಳಿದ್ದರಿಂದ ಪೊಲೀಸರು ತೆರವುಗೊಳಿಸುವ ಕಾರ್ಯ ಮಾಡಿಲ್ಲ.