ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂಡೀಗಢದ ಮೇಯರ್ ಚುನಾವಣೆ ಕುರಿತಂತೆ ಸುಪ್ರೀಂ ಕೋರ್ಟಿಗೆ ಹಾಜರಾದ ಚುನಾವಣಾಧಿಕಾರಿ ಅನಿಲ್ ಮಸೀಹ್, ತಾನು ಮತಪತ್ರಗಳನ್ನು ತಿರುಚಿರುವುದನ್ನು ಒಪ್ಪಿಕೊಂಡಿದ್ದಾರೆ.ಹೀಗಾಗಿ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಮರುಚುನಾವಣೆ ನಡೆಸುವ ಬದಲು ರಿಟರ್ನಿಂಗ್ ಅಧಿಕಾರಿ ಮಾಡಿದ ಗುರುತುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮತಪತ್ರಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು .ಮಂಗಳವಾರ(ಫೆ.20) ಮತಪತ್ರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆಯೂ ಕೋರ್ಟ್ ಆದೇಶಿಸಿದೆ.
ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಮನವಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕುದುರೆ ವ್ಯಾಪಾರ ನಡೆಯುತ್ತಿರುವುದು ಕೂಡ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದೆ.
ಮತ ಪತ್ರಗಳನ್ನು ಮಂಗಳವಾರ ಪರೀಕ್ಷೆಗೆ ತರುವಂತೆ ನ್ಯಾಯಾಲಯ ತಿಳಿಸಿದ್ದು, ಹೊಸದಾಗಿ ಚುನಾವಣೆ ನಡೆಸುವ ಬದಲು ಹೊಸ ಚುನಾವಣಾಧಿಕಾರಿಯಿಂದ ಮತ ಎಣಿಕೆ ಮಾಡಬೇಕು ಎಂದು ಆರಂಭದಲ್ಲಿ ಪ್ರಸ್ತಾಪಿಸಿದ ನ್ಯಾಯಾಲಯ, ಮತ ಪತ್ರಗಳನ್ನು ಪರಿಶೀಲಿಸಿದ ನಂತರ ಈ ಬಗ್ಗೆ ನಿರ್ಧರಿಸುವುದಾಗಿ ಹೇಳಿದೆ.
ಮೇಯರ್ ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಬಿಜೆಪಿ ನಾಯಕ ಮನೋಜ್ ಸೋಂಕರ್ ಅವರು ನಿನ್ನೆ ಸಂಜೆ ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ನಡುವೆ, ಆಪ್ನ ಮೂವರು ಸದಸ್ಯರು ಬಿಜೆಪಿ ಸೇರಿದ್ದಾರೆ.