ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ದಕ್ಷಿಣ ಭಾಗದ ಮೂಲಸೌಕರ್ಯ ವಿಸ್ತರಣೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಆನೇಕಲ್‌ನಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ ಕ್ರಿಕೆಟ್ ಸ್ಟೇಡಿಯಂ ಸೇರಿದಂತೆ ಬಹು ಕ್ರೀಡಾ ಸಂಕೀರ್ಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಿಟ್ಟಿದೆ. ಈ ಯೋಜನೆಯಿಂದ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಸುಲಭ ಸಂಚಾರ ಸಾಧ್ಯವಾಗಲಿದೆ.
ಬನ್ನೇರುಘಟ್ಟ ರಸ್ತೆಯಲ್ಲಿ ಸಾಗಲಿರುವ ಕಾಳೇನ ಅಗ್ರಹಾರ–ಕಾಡುಗೋಡಿ ಮೆಟ್ರೋ ಮಾರ್ಗವನ್ನು ಜಿಗಣಿಯಿಂದ ಶಾಖೆ ರೂಪದಲ್ಲಿ ಬೇರ್ಪಡಿಸಿ ಸುಮಾರು 3ರಿಂದ 4 ಕಿಲೋಮೀಟರ್ ವರೆಗೆ ಆನೇಕಲ್ ಕಡೆ ವಿಸ್ತರಿಸುವ ಪ್ರಸ್ತಾವನೆ ಇದೆ. ಈ ವಿಸ್ತರಣೆ ಮೂಲಕ ಆನೇಕಲ್ ಸೂರ್ಯನಗರದಲ್ಲಿ ನಿರ್ಮಾಣವಾಗಲಿರುವ ಭವ್ಯ ಕ್ರೀಡಾ ಸಂಕೀರ್ಣಕ್ಕೆ ನೇರ ಸಂಪರ್ಕ ಸಿಗಲಿದೆ. ಮುಖ್ಯ ಮಾರ್ಗವು ತನ್ನ ಹಾದಿಯಂತೆ ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ಸರ್ಕಲ್ ಹಾಗೂ ವರ್ತೂರು ಕೋಡಿ ಪ್ರದೇಶಗಳನ್ನು ಸಂಪರ್ಕಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Rice series 43 | ಬಾಯಲ್ಲಿ ನೀರೂರಿಸುವ ಪಾಲಕ್ ಖಿಚಡಿ: ಕೇವಲ 20 ನಿಮಿಷಗಳಲ್ಲಿ ತಯಾರಿಸಿ!
ಈ ಮೆಟ್ರೋ ವಿಸ್ತರಣೆ ಸಂಬಂಧ ದೆಹಲಿ ಮೂಲದ ಇಟ್ರೋಸಾಫ್ಟ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಿದ್ದು, ಮಾರ್ಗ ವಿನ್ಯಾಸ, ಪ್ರಯಾಣಿಕರ ಬೇಡಿಕೆ, ಭೂಸ್ವಾಧೀನ, ವೆಚ್ಚ ಹಾಗೂ ಮಧ್ಯಂತರ ನಿಲ್ದಾಣಗಳ ಕುರಿತು ವಿವರಗಳನ್ನು ಸಲ್ಲಿಸಿದೆ.

