ಜನರ ಆಧಾರ್‌ ಕಾರ್ಡ್‌ ನಿಷ್ಕ್ರಿಯ: ಕಾರಣ ಕೇಳಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಜನರ ಆಧಾರ್‌ ಕಾರ್ಡ್‌ಗಳನ್ನು ಏಕಾಏಕಿ ನಿಷ್ಕ್ರಿಯಗೊಳಿಸಲಾಗಿದೆ. ಹೀಗಾಗಿ ಪಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪಶ್ಚಿಮ ಬಂಗಾಳದ ವಿಶೇಷವಾಗಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದ ಜನರ ಆಧಾರ್ ಕಾರ್ಡ್‌ಗಳನ್ನು ನಿರ್ದಾಕ್ಷಿಣ್ಯವಾಗಿ ನಿಷ್ಕ್ರಿಯಗೊಳಿಸುವ ಗಂಭೀರ ಸ್ವರೂಪದ ಹಠಾತ್ ಬೆಳವಣಿಗೆಯನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ ಎಂದು ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ(ಯುಐಡಿಎಐ) ಕೇಂದ್ರ ಕಚೇರಿಯು ಯಾವುದೇ ಕ್ಷೇತ್ರ ವಿಚಾರಣೆ ನಡೆಸದೆ ಅಥವಾ ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ವ್ಯಕ್ತಿಗಳು ಮತ್ತು ಕುಟುಂಬದ ಸದಸ್ಯರಿಗೆ ನೇರವಾಗಿ ನಿಷ್ಕ್ರಿಯಗೊಳಿಸುವ ಪತ್ರಗಳನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

ಯಾವುದೇ ಪೂರ್ವ ಸೂಚನೆಯಿಲ್ಲದೆ ಮತ್ತು ಕಾರ್ಡ್ ಹೊಂದಿರುವವರಿಗೆ ಕೇಳಲು ಯಾವುದೇ ಅವಕಾಶವನ್ನು ನೀಡದೆ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ ಇಂತಹ ಪ್ರಕ್ರಿಯೆಯು ಆಧಾರ್ (ನೋಂದಣಿ) ನಿಯಮ 29 (1) ಅನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತಾಗಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನಾವೆಲ್ಲರೂ ಭಾರತದ ನಾಗರಿಕರು. ಪ್ರತಿಯೊಬ್ಬ ನಿವಾಸಿಯೂ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದರೂ ಅಥವಾ ಇಲ್ಲದಿದ್ದರೂ ಸಹ, ಪಶ್ಚಿಮ ಬಂಗಾಳ ಸರ್ಕಾರದ ಕಲ್ಯಾಣ ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!