ಹೊಸದಿಗಂತ ವರದಿ ಮಡಿಕೇರಿ:
ರಾಮನಗರದಲ್ಲಿ ವಕೀಲರ ಮೇಲೆ ಪೊಲೀಸರು ಅನವಶ್ಯಕವಾಗಿ ಮೊಕದ್ದಮೆ ದಾಖಲಿಸಿರುವುದನ್ನು ವಿರೋಧಿಸಿ ಮಡಿಕೇರಿ ವಕೀಲರ ಸಂಘವು ಮಂಗಳವಾರ ಪ್ರತಿಭಟನೆ ನಡೆಸಿತು.
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ನಡೆದ ಪ್ರಕರಣದ ಹಿನ್ನಲೆಯಲ್ಲಿ 32 ವಕೀಲರ ಮೇಲೆ ರಾಮನಗರ ಪೊಲೀಸರು ಮೊಕದ್ದಮೆ ದಾಖಲಿಸಿರುವುದನ್ನು ವಿರೋಧಿಸಿ ರಾಜ್ಯವ್ಯಾಪಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದು, ಅದರಂತೆ ಮಡಿಕೇರಿಯ ವಕೀಲರು ಮಂಗಳವಾರ ನ್ಯಾಯಾಲಯಗಳ ಕಲಾಪವನ್ನು ಬಹಿಷ್ಕರಿಸುವ ಮೂಲಕ ರಾಮನಗರದ ವಕೀಲರಿಗೆ ಬೆಂಬಲ ವ್ಯಕ್ತಪಡಿಸಿದರು.
ವಕೀಲರ ವಿರುದ್ದದ ಮೊಕದ್ದಮೆಯನ್ನು ಕೂಡಲೇ ಕೈಬಿಡಬೇಕು. ಪೊಲೀಸ್ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕೆಂದೂ ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಮನಗರದ ವಕೀಲ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿ, ಪೊಲೀಸರ ನಿಲುವು ಖಂಡಿಸಿ ಮಡಿಕೇರಿ ವಕೀಲರ ಸಂಘ ನಿರ್ಣಯಕೈಗೊಂಡಿದ್ದು, ಬುಧವಾರ ರಾಜ್ಯದ ವಕೀಲರ ಸಂಘಟನೆಗಳಿಂದ ನಡೆಯುವ ವಿಧಾನಸೌಧ ಚಲೋ ಪ್ರತಿಭಟನೆಯಲ್ಲಿ ಮಡಿಕೇರಿಯ ವಕೀಲರ ಸಂಘದ ಸದಸ್ಯರೂ ಭಾಗವಹಿಸಲಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ಎಂ.ಪಿ.ನಾಗರಾಜ್ ತಿಳಿಸಿದರು.