ಹೊಸದಿಗಂತ ವರದಿ, ಮೈಸೂರು:
ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದನ್ನು ಖಂಡಿಸಿ ಹಾಗೂ ತಕ್ಷಣವೇ ಅವರ ಮೇಲೆ ಕ್ರಮಕೈಗೊಳ್ಳಲು ಆಗ್ರಹಿಸಿ ನಗರದಲ್ಲಿ ಬುಧವಾರ ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ನಗರದ ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನಕ್ಕೆ ಮೆರವಣಿಗೆ ಮೂಲಕ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಭಿತ್ತಿ ಫಲಕಗಳನ್ನು ಹಿಡಿದು ಕಾಂಗ್ರೆಸ್ ಸರ್ಕಾರ, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಹಾಗೂ ಅವರ ಬೆಂಬಲಿಗರ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ರಾಜ್ಯ ಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ನ ನೂತನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ವಿಧಾನಸೌಧದ ಆವರಣದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿ, ದೇಶದ್ರೋಹವೆಸಗಿದ್ದಾರೆ. ತಕ್ಷಣವೇ ಅವರನ್ನು ಸ್ಥಳದಲ್ಲಿ ಬಂಧಿಸದೆ ಬಿಟ್ಟು ಕಳುಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ ಬಳಿಕ ಎಚ್ಚೆತ್ತುಕೊಂಡು ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುವುದಾಗಿ ಹೇಳಿ ತಿಪ್ಪೆ ಸಾರಿಸುವ ಪ್ರಯತ್ನ ನಡೆಸುತ್ತಿದೆ ಎಂದು ಕಿಡಿಕಾರಿದರು.
ದೇಶವನ್ನು ಕಾಯಲು ಯೋಧರು ಪ್ರಾಣದ ಹಂಗು ತೊರೆದು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ನಮ್ಮ ಶತೃ ರಾಷ್ಟç ಪಾಕಿಸ್ತಾನದ ಪರವಾಗಿ ನಮ್ಮ ರಾಜ್ಯದ ವಿಧಾನಸೌಧದ ಆವರಣದಲ್ಲೇ ಘೋಷಣೆ ಕೂಗಿ ಭಾರತೀಯ ಯೋಧರಿಗೆ ಅವಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ದೇಶ ದ್ರೋಹಿಗಳಿಗೆ ಮತ್ತು ಪಾಕಿಸ್ತಾನದ ಪ್ರೇಮಿಗಳಿಗೆ ಬಲ ಬಂದoತಾಗುತ್ತದೆ. ಕಾಂಗ್ರೆಸ್ ತುಷ್ಠೀಕರಣ ನೀತಿ ಅನುಸರಿಸುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ದೇಶಭಕ್ತಿ ಎಂಬುದು ಕಿಂಚಿತ್ತಾದರೂ ಇದ್ದರೆ, ಕೂಡಲೇ ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿ, ಕಠಿಣ ಕ್ರಮಕೈಗೊಳ್ಳಬೇಕು. ಹಾಗೂ ಮಾಧ್ಯಮದವರೊಂದಿಗೆ ದರ್ಪದಿಂದ ವರ್ತಿಸಿರುವ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ರನ್ನು ಕೂಡಲೇ ಕಾಂಗ್ರೆಸ್ನಿoದ ವಜಾ ಮಾಡಬೇಕು. ಅವರ ರಾಜ್ಯಸಭಾ ಸದಸ್ಯ ಸ್ಥಾನವನ್ನು ಕೂಡಲೇ ರದ್ದುಗೊಳಿಸಬೇಕು, ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ತಡೆದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ವ್ಯಾನಿಗೆ ಹತ್ತಿಸಿಕೊಂಡು, ಅಲ್ಲಿಂದ ಕರೆದುಕೊಂಡು ಹೋದರು.
ಬಿಜೆಪಿ ಯುವ ಮೋರ್ಚಾದಿಂದ ನಡೆದ ಈ ಪ್ರತಿಭಟನೆಯಲ್ಲಿ ಅಧ್ಯಕ್ಷ ಕಿರಣ್ಗೌಡ, ಒಬಿಸಿ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು, ಮುಖಂಡರಾದ ಕವೀಶ್ಗೌಡ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.