ಭಾರತದ ‘ಜನೌಷಧ’ ಯೋಜನೆಗೆ ಮಾರಿಷಸ್‌ ಸೇರ್ಪಡೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಮಾರಿಷಸ್‌ ಹಿಂದೂ ಮಹಾಸಾಗರ ಪ್ರದೇಶದಲ್ಲಿನ ವಿವಿಧ ಸವಾಲುಗಳನ್ನು ಎದುರಿಸಲು ಜತೆಯಾಗಿ ಕೆಲಸ ಮಾಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತದ ಆರ್ಥಿಕ ನೆರವಿನಿಂದ ದ್ವೀಪರಾಷ್ಟ್ರದಲ್ಲಿ ಕೈಗೊಂಡಿರುವ ಹಲವು ಅಭಿವೃದ್ದಿ ಯೋಜನೆಗಳನ್ನು ಗುರುವಾರ ವರ್ಚುವಲ್‌ ಆಗಿ ಉದ್ಘಾಟಿಸಿ ಅವರು ಮಾತನಾಡಿದರು.

ಈ ವೇಳೆ ಭಾರತದ ‘ಜನೌಷಧ’ ಯೋಜನೆಗೆ ಮಾರಿಷಸ್‌ ಸೇರ್ಪಡೆಗೊಳ್ಳಲಿದೆ ಎಂದು ಘೋಷಿಸಿದ ಪ್ರಧಾನಿ, ಈ ಯೋಜನೆ ಸೇರಲಿರುವ ಮೊದಲ ದೇಶವಾಗಲಿದೆ ಎಂದರು.

‘ನೆರೆಹೊರೆ ಮೊದಲು’ ನೀತಿಯಡಿ ಮಾರಿಷಸ್‌, ಭಾರತದ ಪ್ರಮುಖ ಪಾಲುದಾರ ಎಂದು ಬಣ್ಣಿಸಿದ ಪ್ರಧಾನಿ, ಕಳೆದ ಕೆಲವು ವರ್ಷಗಳಲ್ಲಿ ಉಭಯ ದೇಶಗಳು ಪರಸ್ಪರ ಸಹಕಾರದಲ್ಲಿ ‘ಹೊಸ ಎತ್ತರ’ ಸಾಧಿಸಿವೆ ಎಂದರು.

‘ಹಿಂದೂಮಹಾಸಾಗರ ಪ್ರದೇಶದಲ್ಲಿ ಎದುರಾಗುತ್ತಿರುವ ಸವಾಲುಗಳು ನಮ್ಮ ಅರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಪ್ರದೇಶದಲ್ಲಿ ಭದ್ರತೆ, ಅಭಿವೃದ್ಧಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಮಾರಿಷಸ್‌ ಪರಸ್ಪರ ಸಹಕಾರದೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿವೆ’ ಎಂದು ತಿಳಿಸಿದರು.

‘ಹೊಸ ಜೆಟ್ಟಿ, ರನ್‌ವೇ ಹಾಗೂ ಇತರ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವುದರೊಂದಿಗೆ ನಾವು ಇತಿಹಾಸ ನಿರ್ಮಿಸಿದ್ದೇವೆ. ಭಾರತ- ಮಾರಿಷಸ್‌ ನಡುವಣ ಆದರ್ಶಪ್ರಾಯ ಪಾಲುದಾರಿಕೆಗೆ ಇದು ಸಂಭ್ರಮದ ಕ್ಷಣ’ ಎಂದು ಮಾರಿಷಸ್‌ ಪ್ರಧಾನಿ ಪ್ರವಿಂದ್ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!