‘ಅನ್ನ ಸೇವೆ’ಯೊಂದಿಗೆ ಮದುವೆ ಕಾರ್ಯಕ್ರಮ ಆರಂಭಿಸಿದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಬಾನಿ ಮನೆಯಲ್ಲಿ ವಿವಾಹ ಕಾರ್ಯಕ್ರಮ ಸಂಭ್ರಮ .ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ವಿವಾಹ ಕಾರ್ಯಕ್ರಮ ಮಾರ್ಚ್ 1ರಂದು ಆರಂಭವಾಗಿ 3ನೇ ತಾರೀಖಿನವರೆಗೆ ಸಾಗಲಿದೆ. ಅದರ ಪೂರ್ವಭಾವಿಯಾಗಿ ಬುಧವಾರ ಮುಕೇಶ್ ಅಂಬಾನಿಯವರ ತವರೂರು ಗುಜರಾತ್ ರಾಜ್ಯದ ಜಾಮ್ನಗರ ನಗರದ ರಿಲಯನ್ಸ್ ಟೌನ್‌ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ ವಿವಾಹ ಪೂರ್ವ ಅಂಗವಾಗಿ ಗ್ರಾಮಸ್ಥರಿಗೆ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ವಿತರಿಸಿ ‘ಅನ್ನ ಸೇವೆ’ಯೊಂದಿಗೆ ಶುಭ ಸಮಾರಂಭ ಆರಂಭವಾಗಿದೆ.

ಅನ್ನಸೇವೆ ಕಾರ್ಯಕ್ರಮದಲ್ಲಿ ಸ್ವತಃ ಮುಕೇಶ್ ಅಂಬಾನಿ, ನವ ವಧೂ-ವರರು ಭಾಗವಹಿಸಿ ಗ್ರಾಮಸ್ಥರಿಗೆ ಸ್ವತಃ ಕೈಯಾರೆ ಬಡಿಸಿದರು.

ಭೋಜನದ ನಂತರ ನೆರೆದಿದ್ದವರು ಸಾಂಪ್ರದಾಯಿಕ ಜಾನಪದ ಸಂಗೀತವನ್ನು ಆನಂದಿಸಿದರು. ಪ್ರಸಿದ್ಧ ಗುಜರಾತಿ ಗಾಯಕ ಕೀರ್ತಿದನ್ ಗಧ್ವಿ ಅವರು ತಮ್ಮ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಅಂಬಾನಿ ಕುಟುಂಬದಲ್ಲಿ ಆಹಾರವನ್ನು ಹಂಚಿಕೊಳ್ಳುವುದು ಹಳೆಯ ಸಂಪ್ರದಾಯವಾಗಿದೆ.ಈ ಸಂದರ್ಭ ಅತಿಥಿಗಳು ಗುಜರಾತ್‌ನ ಕಚ್ಛ್ ಮತ್ತು ಲಾಲ್‌ಪುರದ ಮಹಿಳಾ ಕುಶಲಕರ್ಮಿಗಳು ತಯಾರಿಸಿದ ಸಾಂಪ್ರದಾಯಿಕ ಸ್ಕಾರ್ಫ್‌ಗಳನ್ನು ಬಂದವರಿಗೆ ವಿತರಿಸಲಾಯಿತು.

ಅನಂತ್ ಮತ್ತು ರಾಧಿಕಾ ಜನವರಿ 2023 ರಲ್ಲಿ ಮುಂಬೈಯ ನಿವಾಸ ಆಂಟಿಲಿಯಾದಲ್ಲಿ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!