ಹೊಸದಿಗಂತ ವರದಿ, ಶಿರಸಿ :
ಶಿರಸಿಯಲ್ಲಿ ಮಂಗನ ಕಾಯಿಲೆ ಅಟ್ಟಹಾಸ ಮೆರೆದಿದ್ದು,ಓರ್ವ ಸಾವನ್ನಪ್ಪಿದ್ದಾನೆ.
ಭಾನುವಾರ ತಾಲೂಕಿನ ಹತ್ತರಗಿ ನವಿಲಗಾರದಲ್ಲಿ ವೃದ್ಧ ಸಾವನ್ನಪ್ಪಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ.
ಶಿರಸಿ ತಾಲೂಕಿನ ಹತ್ತರಗಿ ನವಿಲಗಾರದ ಗ್ರಾಮದ ವೃದ್ಧ ಮೃತರಾಗಿದ್ದು, ಕೆಲವು ದಿನಗಳಿಂದ ಉಡುಪಿಯ ಮಣಿಪಾಲ್ ನಲ್ಲಿ ಚಿಕಿತ್ಸೆ ಪಡೆಯುತಿದ್ದರು. ಫಲಕಾರಿಯಾಗದೇ ಅಸುನೀಗಿದ್ದಾರೆ. ಇದಲ್ಲದೇ ಸಿದ್ದಾಪುರ ಭಾಗದಲ್ಲಿ ಈ ಹಿಂದೆ ಎರಡು ಜನರು ಮಂಗನ ಕಾಯಿಲೆಗಿಂದ ಮೃತಪಟ್ಟಿದ್ದರು.
ಜಿಲ್ಲೆಯಲ್ಲಿ ಈ ವರೆಗೆ 47 ಜನರಲ್ಲಿ ಕೆ.ಎಫ್.ಡಿ. ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಸಿದ್ದಾಪುರದಲ್ಲಿ ಅತೀ ಹೆಚ್ಚು ಸೋಂಕಿನ ಪ್ರಕರಣ ವರದಿಯಾಗುತ್ತಿದೆ. ಶಿರಸಿಯಲ್ಲಿ ಇದೇ ಮೊದಲ ಪ್ರಕರಣ ಪತ್ತೆಯಾಗಿದ್ದು, ಅವರು ಮೃತಪಟ್ಟಿದ್ದಾರೆ. ಔಷಧಿ ಇಲ್ಲದ ಪರಿಣಾಮ ಕಾಯಿಲೆ ಪ್ರಮಾಣ ಹೆಚ್ಚಾಗಿದೆ ಎನ್ನಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಾ ವೈದ್ಯರ ಹಾಗೂ ಸಹಾಯಕರ ತಂಡ ಸ್ಥಳಗಳಿಗೆ ಭೇಟಿ ನೀಡಿ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದೆ.