ರೈತರ ಪ್ರತಿಭಟನೆ ಮತ್ತಷ್ಟು ತೀವ್ರ: ಮಾ.10ರಂದು ದೇಶಾದ್ಯಂತ ರೈಲು ತಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ ಹಾಗೂ ಹರಿಯಾಣ ಗಡಿಯಲ್ಲಿ ಸಾವಿರಾರು ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು (Farmers Protest) ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ಮಾರ್ಚ್‌ 10ರಂದು ದೇಶಾದ್ಯಂತ ರೈಲುಗಳನ್ನು ತಡೆದು (Rail Roko) ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ.

ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಹಾಗಾಗಿ, ನಾವೆಲ್ಲ ಪ್ರತಿಭಟನೆಯಿಂದ ಹಿಂದಡಿ ಇಡುವುದು ಸಾಧ್ಯವೇ ಇಲ್ಲ. ನಾವು ಪಂಜಾಬ್‌ ಹಾಗೂ ಹರಿಯಾಣದಿಂದ ಶಾಂತಿಯುತವಾಗಿಯೇ ದೆಹಲಿ ಪ್ರವೇಶಿಸುತ್ತೇವೆ. ರೈತರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಿದ್ದೇವೆ. ಮಾರ್ಚ್‌ 6ರಂದು ದೇಶದ ಎಲ್ಲ ಪ್ರದೇಶಗಳಿಂದ ರೈತರು ದೆಹಲಿಗೆ ಆಗಮಿಸುತ್ತಾರೆ. ಮಾರ್ಚ್‌ 10ರಂದು ದೇಶಾದ್ಯಂತ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಮುಖಂಡ ಜಗಜಿತ್‌ ಸಿಂಗ್‌ ದಲ್ಲೇವಾಲ್‌ ಮಾಹಿತಿ ನೀಡಿದ್ದಾರೆ.

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ತರಬೇಕು ಎಂಬುದಾಗಿ ರೈತರು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆಯೇ, ದ್ವಿದಳ ಧಾನ್ಯಗಳು, ಜೋಳ, ಹತ್ತಿ ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಕುರಿತು ಹೊಸ ಸಮಿತಿ ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹಾಗೆಯೇ, ರೈತರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಯಾವುದೇ ಮಿತಿ ಇರುವುದಿಲ್ಲ ಹಾಗೂ ಖರೀದಿಗಾಗಿ ವೆಬ್‌ ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತದೆ ಎಂಬುದು ಸೇರಿ ಕೇಂದ್ರ ಸರ್ಕಾರವು ರೈತರಿಗೆ ಹಲವು ಆಫರ್‌ ನೀಡಿತ್ತು.

ಆದರೆ, ಕೇಂದ್ರ ಸರ್ಕಾರದ ಆಫರ್‌ ತಿರಸ್ಕರಿಸಿದ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!