ಹೊಸದಿಗಂತ ಡಿಜಿಟಲ್ ಡೆಸ್ಕ್:
ತರಕಾರಿ ತರಲು ಹೊರಟಿದ್ದ ಅಮ್ಮ ಮಗಳ ಜೀವನ ದುರ್ಘಟನೆಯಲ್ಲಿ ಅಂತ್ಯಗೊಂಡಿದೆ. ಕೋರ್ಬಾ ಜಿಲ್ಲೆಯ ದರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕೊರ್ಬಾದ ಕೊಹಾಡಿಯಾ ವಾರ್ಡ್ ನಿವಾಸಿ ರಾಮ್ ಕುಮಾರಿ ವರ್ಮಾ ಅವರು ದರಿ ಮಾರುಕಟ್ಟೆಗೆ ತರಕಾರಿ ಖರೀದಿಸಲು ತೆರಳಿದ್ದರು. ಸ್ಕೂಟರ್‌ನಲ್ಲಿ ತಮ್ಮ ಮಗಳು ರೇಣು ವರ್ಮಾ ಜೊತೆ ಮನೆಗೆ ಹಿಂತಿರುಗುತ್ತಿದ್ದ ವೇಳೆ, ದರಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಎದುರಿನಿಂದ ಅತಿವೇಗವಾಗಿ ಬಂದ ಬೈಕ್ ಸವಾರನಿಂದಾಗಿ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ.
ಇದನ್ನೂ ಓದಿ: ವೆನೆಜುವೆಲಾ ಆಯ್ತು ಇನ್ನು ಮುಂದಿನ ಸರದಿ, ಯಾರ ಮೇಲಿದೆ ಟ್ರಂಪ್ ಕೆಂಗಣ್ಣು?
ಅದೇ ಕ್ಷಣದಲ್ಲಿ ಹಿಂದಿನಿಂದ ವೇಗವಾಗಿ ಬಂದ ಹೆವಿ ಡ್ಯೂಟಿ ಟ್ರಕ್ ತಾಯಿ–ಮಗಳ ಮೇಲೆ ಹರಿದಿದ್ದು, ವಾಹನದ ಚಕ್ರಗಳು ಅವರ ತಲೆಯ ಮೇಲೆ ಹಾದು ಹೋಗಿವೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಬಳಿಕ ಟ್ರಕ್ ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ಟ್ರಕ್ ಚಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

