ಕಾಂಗ್ರೆಸ್ ನಾಯಕರು ಕೇವಲ ಹೇಳಿಕೆಗೆ ಸೀಮಿತ: ಕೋಟ ಶ್ರೀನಿವಾಸ ಪೂಜಾರಿ

ಹೊಸದಿಗಂತ ವರದಿ, ದಾವಣಗೆರೆ:

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದು ಒಂಭತ್ತು ತಿಂಗಳಾದರೂ 50 ಮೀಟರ್ ರಸ್ತೆಯೂ ಆಗಿಲ್ಲ. ಆದರೆ, ರಾಷ್ಟ್ರ ವಿರೋಧಿಗಳು, ಭಯೋತ್ಪಾದಕರು ಬೀದಿಗಿಳಿದು ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ದಾವಣಗೆರೆ ಕ್ಷೇತ್ರದ ಕುರಿತಂತೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ರಾಜಾರೋಷವಾಗಿ ಬಾಂಬ್ ಇಟ್ಟು ಹೋಗಿದ್ದಾರೆ. ಪ್ರಕರಣದ ಆರೋಪಿಯನ್ನು ಬಂಧಿಸುವ ಬದಲು, ಕಾಂಗ್ರೆಸ್ ಪಕ್ಷದ ಅಧಿಕಾರಸ್ಥರು ಕೇವಲ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾಡಿನ 7 ಕೋಟಿ ಜನರ ಹೃದಯವಾದ ವಿಧಾನಸೌಧದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿದ್ದಾರೆ. ಇದರಿಂದ ಇಡೀ ರಾಜ್ಯದ ಜನತೆಗೆ ನೋವುಂಟಾಗಿದೆ. ಇತಿಹಾಸದಲ್ಲಿ ಆಗದೇ ಇರುವ ಕೃತ್ಯವು ವಿಧಾನಸೌಧದಲ್ಲಿ ಆಗಿದೆ. ವಿಧಿವಿಜ್ಞಾನ ಕೇಂದ್ರದಿಂದ ಮಾಹಿತಿ ಬಂದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಕಾಂಗ್ರೆಸ್ಸಿಗರು ಇಲ್ಲ ಎಂದು ಹರಿಹಾಯ್ದರು.

ಪಾಕ್ ಪರ ಘೋಷಣೆ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರನ್ನೇ ಬೆದರಿಸುವ ಕೆಲಸವನ್ನು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಮಾಡಿದ್ದಾನೆ. ಎಫ್‌ಎಸ್‌ಎಲ್ ವರದಿ ಇದ್ದರೂ ಎಷ್ಟು ಜನರನ್ನು ಬಂಧಿಸಿದ್ದೀರಿ? ಪಾಕ್ ಪರ ಘೋಷಣೆ ವಿಚಾರವನ್ನು ಬಿಟ್ಟು, ಉಳಿದಿದ್ದಕ್ಕೆಲ್ಲಾ ಉತ್ತರ ಕೊಡುತ್ತೇನೆಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದರೂ ಸಿದ್ದರಾಮಯ್ಯ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಈ ರೀತಿ ಅಸಹಾಯಕತೆ ತೋಡಿಕೊಳ್ಳುವವರು ಹೇಗೆ ದೇಶದ ಜನರನ್ನು ಕಾಪಾಡುತ್ತಾರೆ? ಎಂದು ಅವರು ಪ್ರಶ್ನಿಸಿದರು.

ಮಾತೆತ್ತಿದರೆ ಸಂವಿಧಾನದ ರಕ್ಷಣೆ ಎನ್ನುತ್ತಾರೆ. ಕಾಂಗ್ರೆಸ್ಸಿನವರೇ ಹೇರಿದ ತುರ್ತು ಪರಿಸ್ಥಿತಿ ಹೊರತುಪಡಿಸಿ, ಯಾವತ್ತೂ ಸಂವಿಧಾನಕ್ಕೆ ಧಕ್ಕೆಯಾಗಿಲ್ಲ. ಈಗ ಸಂವಿಧಾನ ಜಾಗೃತಿ ಜಾಥಾ ಹೆಸರಿನಲ್ಲಿ ದೇಶವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡವರನ್ನು ಭಾಷಣ ಮಾಡಲು ಆಹ್ವಾನಿಸುತ್ತಾರೆ. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕಾಂಗ್ರೆಸ್ ಪಕ್ಷವು ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಬಳಕೆ ಮಾಡಿಕೊಂಡಿದ್ದು ನೋವಿನ ಸಂಗತಿ. ಒಲ್ಲದ ಮನಸ್ಸಿನಿಂದಲೇ ಇದನ್ನು ನೀಡಿದೆ ಎಂಬುದಾಗಿ ಸಮಾಜ ಕಲ್ಯಾಣ ಸಚಿವರು ಹೇಳುತ್ತಾರೆ. ಇಂತಹವರಿಂದ ಪರಿಶಿಷ್ಟ ಜಾತಿ-ಪಂಗಡಗಳ ಜನರ ಕಲ್ಯಾಣವಾದರೂ ಸಾಧ್ಯವೇ? ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ರಾಜ್ಯಾದ್ಯಂತ ಪ್ರತಿ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ದೇಶಕ್ಕೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕರ ಅವಶ್ಯಕವಿರುವ ಹಿನ್ನೆಲೆಯಲ್ಲಿ ಜನರ ಒಲವು ಬಿಜೆಪಿ ಕಡೆ ಇರುವುದು ಕಂಡು ಬರುತ್ತಿದೆ. ಪ್ರತಿ ಕ್ಷೇತ್ರದಂತೆ ಈ ಕ್ಷೇತ್ರದ ಅಭಿಪ್ರಾಯ ಸಂಗ್ರಹದ ನಂತರ ದಾವಣಗೆರೆ ಕ್ಷೇತ್ರವನ್ನೂ ಮತ್ತೆ ಗೆದ್ದೇ ಗೆಲ್ಲುತ್ತೇವೆಂಬ ಸಂಪೂರ್ಣ ವಿಶ್ವಾಸ ನಮಗೆ ಇದೆ. ಪಕ್ಷವೆಂದ ಮೇಲೆ ಗುಡುಗು, ಮಿಂಚು ಇದ್ದೇ ಇರುತ್ತದೆ. ಮಳೆ ಬಂದ ಮೇಲೆ ಎಲ್ಲವೂ ಸರಿಯಾಗುತ್ತದೆ. ನಾವೂ ಸಹ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದು, ಪ್ರಾಮಾಣಿಕವಾಗಿ ರಾಜ್ಯ ಸಮಿತಿ ಮೂಲಕ ಕೇಂದ್ರಕ್ಕೆ ವರದಿ ಕಳಿಸಿಕೊಡುತ್ತೇವೆ. ದಾವಣಗೆರೆ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!