ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮುಂದಿನ 10 ವರ್ಷಗಳ ಕಾಲ ಆಡಳಿತದಲ್ಲಿ ಮುಂದುವರಿಯುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭವಿಷ್ಯ ನುಡಿದಿದ್ದಾರೆ.
ನಮ್ಮ ದೇಶದಲ್ಲಿ ಕ್ರಿಯಾತ್ಮಕ ಪ್ರಜಾಪ್ರಭುತ್ವವಿದೆ ನಮ್ಮ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಅದರ ಆಧಾರದ ಮೇಲೆ ಜನಾದೇಶ ಬರುತ್ತದೆ. ಕೆಲಸ ಮಾಡುವವರಿಗೆ ದೇಶ ಅವಕಾಶವನ್ನು ನೀಡುತ್ತದೆ. ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ನಾವು ಅಧಿಕಾರದಲ್ಲಿ ಉಳಿಯುತ್ತೇವೆ. ಇಲ್ಲದಿದ್ದರೆ ಇಲ್ಲ. ಆದರೆ ಮುಂದಿನ 10 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಂದು ನಾನು ನಿಮಗೆ ಹೇಳಬಲ್ಲೆ ಎಂದರು.
ಪ್ರಧಾನಿ ಕುಟುಂಬದ ಬಗ್ಗೆ ಪ್ರಶ್ನೆ ಎತ್ತಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧವೂ ವಾಗ್ದಾಳಿ ನಡೆಸಿದ ಅಮಿತ್ ಶಾ, ಅವರು ಅಸಂಬದ್ಧವಾಗಿ ಮಾತನಾಡುವ ಮೂಲಕ ದೇಶದ ರಾಜಕೀಯದ ಮಟ್ಟವನ್ನು ತಗ್ಗಿಸಲು ಯತ್ನಿಸಿದ್ದಾರೆ. ಜನ ಪ್ರತಿ ಬಾರಿಯೂ ಅವರಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ. ನಾನು ಮೋದಿ ಜಿ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ, ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದೇನೆ. ಒಂದರ್ಥದಲ್ಲಿ ಲಾಲೂ ಜಿ. ಮೋದಿಜಿಗೆ ಕುಟುಂಬವಿಲ್ಲ ಎಂದು ಸರಿಯಾಗಿಯೇ ಹೇಳಿದ್ದಾರೆ. ಯಾಕೆಂದರೆ ಕುಟುಂಬಗಳನ್ನು ಹೊಂದಿರುವವರು ತಮ್ಮ ಪುತ್ರರು ಮತ್ತು ಪುತ್ರಿಯರನ್ನು ಪ್ರಧಾನಿ ಮತ್ತು ಮುಖ್ಯಮಂತ್ರಿಯನ್ನಾಗಿ ಮಾಡಲು ಯತ್ನಿಸುತ್ತಾರೆ ಎಂದು ತಿರುಗೇಟು ನೀಡಿದರು.
40 ವರ್ಷಗಳಿಂದ ಮೋದಿ ದೇಶದ ಜನರಿಗಾಗಿ ಮಾತ್ರ ಕೆಲಸ ಮಾಡಿದ್ದಾರೆ, 23 ವರ್ಷಗಳ ಕಾಲ ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದರೂ ಅವರು ರಜೆ ತೆಗೆದುಕೊಂಡಿರುವುದನ್ನು ನಾನು ನೋಡಿಲ್ಲ. ಪ್ರಧಾನಿ ಮೋದಿ ಅವರು ಬೆಳಗ್ಗೆ 5 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಶ್ರದ್ಧೆಯಿಂದ ಕೆಲಸ ಮಾಡುವುದನ್ನು ನಾನು ನೋಡಿದ್ದೇನೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.