ಗುರುಕುಲ ಶಿಕ್ಷಣದಿಂದ ಜ್ಞಾನದ ಜತೆಗೆ ಪದ್ಧತಿಯ ಪುನರ್ಜೀವನ: ಮುಕುಂದ ಸಿ. ಆರ್.

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿಕ್ಷಣ ಬದುಕಿನ ಮಹತ್ವವಾದ ಭಾಗವಾಗಿದ್ದು, ಹಿರಿಯರು ಕೊಟ್ಟು ಹೋದ್ದನ್ನು ಇವತ್ತಿನ ಜಗತ್ತಿನ ಬೇಕಾದ ಸೂಕ್ತ ರೀತಿಯಲ್ಲಿ ಎಲ್ಲರ ಅರಿವಿಗೆ ತರುವ ಪ್ರಯತ್ನವಾಗುತ್ತಿದೆ. ವಿದೇಶದ ಸಾಂಸ್ಕೃತಿಕ ಆಕ್ರಮಣದಲ್ಲಿ ದೇಶದ ಶಿಕ್ಷಣ ಪದ್ಧತಿಯಲ್ಲಿ ಅನೇಕ ವ್ಯತ್ಯಾಸವಾದ್ದರಿಂದ ಜ್ಞಾನದಲ್ಲಿ ಬದಲಾವಣೆಯಾಗಿದೆ. ಶಿಕ್ಷಣದ ಜ್ಞಾನದ ಜತೆಗೆ ಪದ್ಧತಿಯನ್ನು ಪುನರ್ಜೀವನಗೊಳಿಸುವ ಅಗತ್ಯ ದೇಶದಲ್ಲಿ ಕಂಡುಬಂದಿದ್ದು, ಗುರುಕುಲದ ಪದ್ಧತಿಯ ಮೂಲಕ ಅದನ್ನು ಪೂರ್ಣಗೊಳಿಸುವ ಕಾರ್ಯವಾಗುತ್ತಿದೆ. ವೇದ ವಿಜ್ಞಾನವನ್ನು ಎಲ್ಲಾ ಸಮುದಾಯಕ್ಕೆ ಕಲಿಸಿಕೊಡುವ ಕಾರ್ಯವನ್ನು ಗುರುಕುಲ ಪದ್ಧತಿಯ ಮೂಲಕ ನಡೆಸುವ ಜತೆಗೆ ಗುರು ಕೇಂದ್ರೀಕೃತವಾದ ಚಟುವಟಿಕೆಯನ್ನು ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಸಿ. ಆರ್. ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಮೂರುಕಜೆ ಅಜೇಯ ಟ್ರಸ್ಟ್ ಮೈತ್ರೇಯೀ ಗುರುಕುಲಂ ವಸತಿ ಸಮುಚ್ಚಯ ನೂತನ ಕಟ್ಟಡ ‘ಪರಮೇಶ್ವರೀ ಅಮ್ಮಾ ಕುಟೀ’ ಇದರ ಉದ್ಘಾಟಿಸಿ ಮಾತನಾಡಿದರು.

ಬ್ರಿಟಿಷರ ಆಗಮನದ ಬಳಿಕ ದೇಶದ ಸುಂದರ ಶಿಕ್ಷಣ ಪದ್ದತಿಯನ್ನು ಹಾಳುಗೆಡವಲಾಗಿದೆ. ಶಿಕ್ಷಣದಲ್ಲಿ ಶಾಲೆಗಳಿಗಿಂತಲೂ ಗುರುಕುಲಕ್ಕೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ. ಶಿಕ್ಷಕ ವಿದ್ಯಾರ್ಥಿಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಕಲಿಸುವ ಕಾರ್ಯ ಮಾಡಿದರೆ, ಗುರು ಜವಾಬ್ದಾರಿಯುತ ವ್ಯಕ್ತಿಯ ನಿರ್ಮಾಣ ಮಾಡುತ್ತಾನೆ. ಗುರುಕುಲಕ್ಕೆ ಬಂದವರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಆಳವಾದ ಚಿಂತನೆಗಳಿದ್ದು, ಹೊಸ ವ್ಯಕ್ತಿತ್ವ ನಿರ್ಮಾಣ ಕಾರ್ಯವಾಗುತ್ತಿದೆ. ದೇಶದಾದ್ಯಂತ ಗುರುಕುಲದ ಪ್ರಯೋಗ ನಡೆಯುತ್ತಿದ್ದು, ಶಿಕ್ಷಣವನ್ನು ಪ್ರಾಚೀನ ದೃಷ್ಟಿಯಿಂದ ನೋಡುವ ಕಾರ್ಯ ಜಗತ್ತಿನಲ್ಲಿ ನಡೆಯುತ್ತಿದೆ. ಶಿಕ್ಷಣ ನೀಡುವ ಪದ್ಧತಿಯ ಬದಲಾವಣೆ ಬಗ್ಗೆ ಸಮಾಜದ ಅನುಭವಸ್ಥರಲ್ಲಿ ಬಹಳ ದೊಡ್ಡಮಟ್ಟದ ಚರ್ಚೆ ನಡೆಯುತ್ತಿದೆ ಎಂದರು.

ಸಾಮಾನ್ಯ ಶಿಕ್ಷಣ ಪದ್ಧತಿಯ ಜತೆಗೆ ಪ್ರಾಚೀನ ಶಾಸ್ತ್ರಗಳ ಜತೆಗೆ ಕಲಿಸಲಾಗುತ್ತಿದೆ. ಈಗಿನ ಶಿಕ್ಷಣವನ್ನು ಪ್ರಾಚೀನ ಶಿಕ್ಷಣದ ದೃಷ್ಠಿಯಿಂದ ನೋಡುವ ಕಾರ್ಯ ನಡೆಯುತ್ತಿದೆ. ಗುರುಕುಲದ ಪದ್ಧತಿಯ ವಿನೂತನ ಪ್ರಯೋಗಗಳು ಜಗತ್ತಿನಾಧ್ಯಂತ ನಡೆಯುತ್ತಿದ್ದು, ಪ್ರಾಚೀನ ಶಾಸ್ತ್ರಗಳ ಅಧ್ಯಯನ ಕಾರ್ಯವೂ ನಡೆಯುತ್ತಿದೆ. ಜಗತ್ತಿನ ಅತ್ಯಾಧುನಿಕ ಪದ್ಧತಿಯಾಗಬೇಕೆಂಬ ತೀರ್ಮಾನಕ್ಕೆ ತಜ್ಞರು ಬಂದಿದ್ದು, ಯಾವುದೇ ಹೊಸ ಶಬ್ಧ ಪ್ರಯೋಗ ಮಾಡದೆ ಮೂರು ದಶಕಗಳಿಂದ ಗುರುಕುಲದ ಮೂಲಕ ಮಾಡಿಕೊಂಡು ಬರಲಾಗುತ್ತಿದೆ. ಜಗತ್ತಿಗೆ ಜ್ಞಾನವನ್ನು ಹಾಗೂ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಜವಾಬ್ದಾರಿ ಗುರುಕುಲಗಳ ವಿದ್ಯಾರ್ಥಿಗಳಿಗೆ ಇದೆ ಎಂದು ತಿಳಿಸಿದರು.

ಭಾವಚಿತ್ರ ಅನಾವರಣ ಬಗ್ಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ದೇಶದ ಆತ್ಮ ಇದ್ದಂತಿರುವ ತಾಯಿ ಸರ್ವ ಶ್ರೇಷ್ಠರಾಗಿದ್ದಾರೆ. ದೇಶೀ ಚಿಂತನೆಯಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಕ್ಕಿದಾಗ ಸಮಾಜ ಉತ್ತಮವಾಗಿರುತ್ತದೆ. ಮಾತೃಶಕ್ತಿಯಲ್ಲಿ ಪರಿವರ್ತನೆಯನ್ನು ಮಾಡಿದಾಗ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಸೇವಾ ಮನೋಭಾವದಿಂದ ಗುರುಕುಲಕ್ಕೆ ಪರಮೇಶ್ವರೀ ಅಮ್ಮಾ ಜಾಗವನ್ನು ದಾನ ಮಾಡಿದ್ದಾರೆ. ಹಳ್ಳಿಯ ಮೂಲೆಯ ಹೆಣ್ಣು ಮಕ್ಕಳಲ್ಲಿ ಧರ್ಮಯುತ ಶಿಕ್ಷಣದ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಮುಂಬಯಿ ಹೇರಂಬ ಇಂಡಸ್ಟ್ರೀಸ್ ಮಾಲೀಕ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಗುರುಕುಲದ ಜಾಗ ಅಂತರಂಗಕ್ಕೆ ಹತ್ತಿರವಾಗುವಂತಿದೆ. ಸಂಘದ ವಿಚಾರಧಾರೆಗಳು ನಮ್ಮ ವ್ಯವಸ್ಥೆಗೆ ಹತ್ತಿರವಾಗಿದೆ. ಧರ್ಮದ ಮೇಲಿನ ಪ್ರೀತಿಯಿಂದ ಹಿಂದೂ ಸಮಾಜಕ್ಕೆ ಕಾರ್ಯರೂಪದಲ್ಲಿ ಕೆಲಸಗಳನ್ನು ಮಾಡಲಾಗುತ್ತಿದೆ. ದೇಶದ ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಯುವಶಕ್ತಿಗೆ ಶಿಕ್ಷಣ ಲಭಿಸಬೇಕಾಗಿದೆ. ಸನಾತನ ಧರ್ಮದ ವಿಚಾರಧಾರೆಯನ್ನು ತಿಳಿಸುವ ನಿಟ್ಟಿನಲ್ಲಿ ಗುರುಕುಲ ಶಿಕ್ಷಣ ಪದ್ಧತಿಯ ಅಗತ್ಯವಿದೆ ಎಂದು ತಿಳಿಸಿದರು.

ಬೆಂಗಳೂರಿನ ಎಂ. ಆರ್. ಜಿ. ಗ್ರೂಪ್ ಸಿ. ಎಂ. ಡಿ. ಕೆ. ಪ್ರಭಾಶ್ ಶೆಟ್ಟಿ ಮಾತನಾಡಿ, ಮನುಷ್ಯನ ಗೌರವಯುತ ಬದುಕಿನಲ್ಲಿ ಅನ್ನ, ಅರಿವು, ಆಶ್ರಯ ಅಗತ್ಯವಾಗಿದೆ. ಸನ್ಮಾರ್ಗದ ಸಂಕಲ್ಪದಲ್ಲಿ ಮುನ್ನಡೆದಾಗ ಯಶಸ್ವಿ ಲಭಿಸುತ್ತದೆ. ಸ್ವಯಂ ಸೇವಕ ಸಂಘದ ಚಟುವಟಿಕೆಗಳು ಬದುಕಿಗೆ ಪ್ರೇರಣೆ ನೀಡುವ ಕೆಲಸವನ್ನು ಮಾಡುತ್ತದೆ. ಸುಂದರ ತೋಟದಂತಿರುವ ದೇಶದ ಸತ್ವವನ್ನು ತಿಳಿದು ಉಳಿಸುವ ಪ್ರಯತ್ನ ಮಾಡಬೇಕು. ಸೇವಾಚಟುವಟಿಕೆಯ ಮೂಲಕ ಬದುಕನ್ನು ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ನಾರಾಯಣ ಭಟ್ಟ ಪರಮೇಶ್ವರೀ ಅಮ್ಮಾ ದಂಪತಿಗಳ ಭಾವಚಿತ್ರ ಅನಾವರಣ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಆನಂದ ಆಶ್ರಮ ಟ್ರಸ್ಟ್ ಅಧ್ಯಕ್ಷ ಡಾ. ಗೌರಿ ಪೈ ವಹಿಸಿದ್ದರು. ಅಜೇಯ ಟ್ರಸ್ಟಿನ ಅಧ್ಯಕ್ಷ ಎಸ್. ಆರ್. ರಂಗಮೂರ್ತಿ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಕೋಶಾಧಿಕಾರಿ ಪಿ. ಸುಬ್ರಾಯ ಪೈ ವಂದಿಸಿದರು. ಮಾತೃಶ್ರೀ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!