ಹೊಸದಿಗಂತ ವರದಿ,ನಾಗಮಂಗಲ :
ಜಮೀನಿನ ಖಾತೆ ಮಾಡಿಕೊಡುವ ಸಂಬಂಧ ರೈತರೊಬ್ಬರಿಂದ ರು.20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬ ಗುರುವಾರ ಮಧ್ಯಾಹ್ನ ತಾಲೂಕಿನ ಹೊಣಕೆರೆ ನಾಡಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಶ್ರೀರಘುರಾಮಪುರ ಮತ್ತು ಹೊಣಕೆರೆ ವೃತ್ತದ ನಾಗರಾಜ್ ಎಂಬಾತನೇ ರೈತರೊಬ್ಬರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಗ್ರಾಮ ಲೆಕ್ಕಾಧಿಕಾರಿಯಾಗಿದ್ದು, ಹೊಣಕೆರೆ ಗ್ರಾಮದ ಶಿವಣ್ಣ ಎಂಬ ರೈತನಿಂದ ಜಮೀನಿನ ಪೌತಿ ಖಾತೆ ಮಾಡಿಕೊಡಲು ರು.20 ಸಾವಿರಕ್ಕೆ ಬೇಡಿಕೆಯಿಟ್ಟು ಮುಂಗಡವಾಗಿ ರು.7ಸಾವಿರ ಲಂಚ ಪಡೆದಿದ್ದರು. ಉಳಿದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ರೈತ ಶಿವಣ್ಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಗುರುವಾರ ಮಧ್ಯಾಹ್ನ ಹೊಣಕೆರೆ ನಾಡಕಚೇರಿಯಲ್ಲಿ ರೈತ ಶಿವಣ್ಣನಿಂದ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ಲಂಚದ ಬಾಕಿ ಹಣ ಪಡೆಯುತ್ತಿದ್ದರು. ಇದೇ ವೇಳೆಗೆ ದಿಢೀರ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ನಾಗರಾಜ್ನನ್ನು ವಶಕ್ಕೆ ಪಡೆದು ಮಂಡ್ಯಕ್ಕೆ ಕರೆದೊಯ್ದಿದ್ದಾರೆಂದು ಹೇಳಲಾಗಿದೆ.
ಜಿಲ್ಲಾ ಲೋಕಾಯುಕ್ತ ಎಸ್ಪಿ ಸುರೇಶ್ಬಾಬು ಮತ್ತು ಡಿವೈಎಸ್ಪಿ ಸುನಿಲ್ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಬ್ಯಾಟರಾಯಗೌಡ, ಸಿಬ್ಬಂದಿಗಳಾದ ಶರತ್, ಶಂಕರ್ ನವೀನ್ ಹಾಗೂ ಮಾನಸ ಕರ್ತವ್ಯ ನಿರ್ವಹಿಸಿದ್ದರು.