ವಿಕಸಿತ ಭಾರತ ನಿರ್ಮಾಣ ಬಿಜೆಪಿ ಪಕ್ಷದ ಗುರಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್

ಹೊಸದಿಗಂತ ವರದಿ, ಚಿತ್ರದುರ್ಗ :

ವಿಕಸಿತ ಭಾರತ ನಿರ್ಮಾಣ ಬಿಜೆಪಿ ಪಕ್ಷದ ಗುರಿ. ಹಾಗಾಗಿ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ದೇಶದ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಕರೆ ನೀಡಿದರು.

ಜಿಲ್ಲಾ ವಿಜೆಪಿ ವತಿಯಿಂದ ನಗರದ ಕಮ್ಮಾರೆಡ್ಡಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಲೋಕಸಭಾ ಕ್ಷೇತ್ರದ ಬೂತ್ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಮಹತ್ವದ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ದೇಶದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇದರಿಂದ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇನ್ನೂ ಹೆಚ್ಚು ಅಭಿವೃದ್ಧೀ ಹೊಂದುವ ಮೂಲಕ ಭಾರತ ವಿಶ್ವಗುರುವಾಗಬೇಕು. ಇದಕ್ಕಾಗಿ ದೇಶದ ಜನರು ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಮಹಿಳಾ ಶಕ್ತಿ, ಯುವ ಶಕ್ತಿ, ಕಿಸಾನ್ ಶಕ್ತಿ ಹಾಗೂ ಬಡವರ ಕಲ್ಯಾಣ ಎಂಬ ನಾಲ್ಕು ಪ್ರಧಾನ ವಿಷಯಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳ ರಕ್ಷಣೆಗಾಗಿ ಬೇಟಿ ಬಚಾವೋ, ಬೇಟಿ ಪಡಾವೋ, ಮನೆ ಮನೆಗೆ ನಲ್ಲಿ ನೀರು, ಮನೆ ಮನೆಗೆ ಶೌಚಾಲಯ, ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ನೀಡಿದ್ದಾರೆ. ತ್ರಿವಳಿ ತಲಾಖ್ ನಿಷೇಧಿಸಿದ್ದಾರೆ. ಮುದ್ರಾ ಯೊಜನೆ ಮೂಲಕ ಬಡವರಿಗೆ ಸಾಲದ ವ್ಯವಸ್ಥೆ, ವಿಶ್ವಕರ್ಮ ಯೋಜನೆ ಮೂಲಕ ಅನೇಕರಿಗೆ ದುಡಿಯುವ ಅವಕಾಶ ನೀಡಿದ್ದಾರೆ. ರಾಜಕೀಯದಲ್ಲಿ ಶೇ೩೩ ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಿದ್ದಾರೆ ಎಂದು ಹೇಳಿದರು.

ಯುವಕರಿಗೆ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭಿಮಾ ಯೋಜನೆ ಮೂಲಕ ರೈತರಿಗೆ ನೆರವು ನೀಡಿದ್ದಾರೆ. ಒನ್ ನೇಷನ್, ಒನ್ ರೇಷನ್ ಎಂಬ ಘೋಷ ವಾಕ್ಯದಡಿ ದೇಶದಲ್ಲಿ ಸುಮಾರು ೮೦ ಕೋಟಿ ಜನರಿಗೆ ಪ್ರತಿ ತಿಂಗಳು ಉಚಿತವಾಗಿ ೫ ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಅಂತ್ಯೋದಯ, ಗ್ರಾಮೋದಯ, ಸರ್ವೋದಯ ಎಂಬ ಪರಿಕಲ್ಪನೆಯಡಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಗ್ರಾಮೋದಯ ಪರಿಕಲ್ಪನೆಯಡಿ ಗ್ರಾಮೀಣ ಭಾಗದ ರಸ್ತೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದು ವಿವರಿಸಿದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ೨೦೨೪ ರಲ್ಲಿ ಮತ್ತೊಮ್ಮೆ ಮೋದಿ, ಮತ್ತೊಮ್ಮೆ ಬಿಜೆಪಿ ಎಂಬ ಉದ್ದೇಶದಿಂದ ಪಕ್ಷದ ಕಾರ್ಯಕರ್ತರು ಚುನಾವಣಾ ಪ್ರಚಾರ ನಡೆಸಬೇಕು. ಯಾವುದೇ ಒಂದು ಸರ್ಕಾರ ಐದು ವರ್ಷಗಳ ಕಾಲ ಆಡಳಿತ ನಡೆಸಿದ ನಂತರ ಆಡಳಿತ ವಿರೋಧಿ ಅಲೆ ಉಂಟಾಗುತ್ತದೆ. ಆದರೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ೩೦ ವರ್ಷ ಆಡಳಿತ ನಡೆಸಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕಳೆದ ೧೦ ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಆದರೆ ಯಾವುದೇ ಆಡಳಿ ವಿರೋಧಿ ಅಲೆ ಇಲ್ಲ ಎಂದರು.
ಈ ಬಾರಿಯ ಯೋಜನೆ ಮತ್ತೊಮ್ಮೆ ಬಿಜೆಪಿ ಮಾತ್ರವಲ್ಲ, ೩೭೦ ಸ್ಥಾನಗಳನ್ನು ಗೆಲ್ಲುವುದು ಸಂಕಲ್ಪ. ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ, ದೇಶದ ಮತದಾರರು ಸಹ ಇಂತಹ ಮಹತ್ವದ ನಿರ್ಧಾರ ಮಾಡಿದ್ದಾರೆ. ಇದರಿಂದಾಗಿ ಎನ್‌ಡಿಎ ಮೈತ್ರಿ ಕೂಟಕ್ಕೆ ಈ ಬಾರಿ ದೇಶದಲ್ಲಿ ೪೦೦ಕ್ಕೂ ಅಧಿಕ ಸ್ಥಾನಗಳು ಲಭಿಸಲಿವೆ ಎಂದು ಮಾದ್ಯಮಗಳು ವರದಿ ಮಾಡುತ್ತಿವೆ. ಕೇವಲ ರಾಮ ಮಂದಿರ, ಜಮ್ಮು-ಕಾಶ್ಮೀರ ತೋರಿಸಿ ನಾವು ಮತ ಕೇಳುತ್ತಿಲ್ಲ. ದೇಶದ ಪ್ರತಿ ಮನೆ ಮನೆಗಳಿಗೆ ಬಿಜೆಪಿ ಸರ್ಕಾರ ಸೌಲಭ್ಯಗಳನ್ನು ನೀಡಿದೆ ಎಂದು ಹೇಳಿದರು.

ಶಿವಮೊಗ್ಗ ಶಾಸಕ ಚನ್ನಬಸಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ್ದಯ ಪ್ರಧಾನಿ ನರೇಂದ್ರ ಮೋದಿ. ದೇಶಕ್ಕೆ ಮೋದಿ ಮುಖ್ಯ ಎಂದು ಬೇರೆ ದೇಶಗಳ ಮುಖ್ಯಸ್ಥರು ಸಹ ಹೇಳುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಬಳಿಕ ಜಿ-೨೦ ರಾಷ್ಟ್ರಗಳ ಸಭೆ ಭಾರತದಲ್ಲಿ ನಡೆಯುವಂತೆ ಮಾಡಿದ್ದು ನರೇಂದ್ರ ಮೋದಿ. ಮೋದಿ ಸರ್ಕಾರ ನೂರಾರು ಯೋಜನೆಗಳನ್ನು ನೀಡಿದೆ. ಆದರೆ ಕೇವಲ ಐದು ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್‌ನವರು ಬಡಾಯಿ ಕೊಟ್ಟಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅದರಂತೆ ರಾಜ್ಯ ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಹಣ ಬೇಕೆಂದು ಕೇಳುತ್ತಿದ್ದಾರೆ. ಆದರೆ ಚಿತ್ರದುರ್ಗ ಕ್ಷೇತ್ರದಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.

ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿದರು. ಮಾಜಿ ಸಚಿವ ಭೈರತಿ ಬಸವರಾಜ್, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಚಿದಾನಂದಗೌಡ, ಮಾಜಿ ಸಂಸದ ಜನಾರ್ಧನಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಅನಿಲ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!