ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಇದರ ಬೆನ್ನಲ್ಲೇ ಅಸಮಾಧಾನ ಸ್ಪೋಟಗೊಂಡಿದೆ.
ಮೊದಲ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಭುವನ್ ಚಂದ್ರ ಖಂಡೂರಿ ಅವರ ಪುತ್ರ ಮನೀಶ್ ಖಂಡೂರಿ ಪಕ್ಷ ತೊರೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮನೀಷ್, ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಮತ್ತು ಎಲ್ಲಾ ಸಂಬಂಧಿತ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ. ಯಾವುದೇ ವೈಯಕ್ತಿಕ ಲಾಭದ ನಿರೀಕ್ಷೆ ಇಲ್ಲದೇ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
2019ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮನೀಷ್ ಗರ್ವಾಲ್ (ಪೌರಿ) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ತೀರತ್ ಸಿಂಗ್ ರಾವತ್ ಅವರ ವಿರುದ್ಧ ಸೋಲುಂಡಿದ್ದರು. ಈ ಬಾರಿಯೂ ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮನೀಷ್ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಿದ ಕಾರಣ ಕಾಂಗ್ರೆಸ್ ತೊರೆದಿದ್ದಾರೆ ಎಂದು ಉನ್ನತ ಸುದ್ದಿ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಾಖಂಡ ಬಿಜೆಪಿ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಮಹೇಂದ್ರ ಭಟ್ ಚುನಾವಣೆ ಹೊಸ್ತಿಲಲ್ಲಿ ಎಲ್ಲರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಾನು ಅವರಿಗೆ ಬಿಜೆಪಿಗೆ ಬರುವಂತೆ ಮನವಿ ಮಾಡುತ್ತೇನೆ. ಅವರ ತಂದೆ ಹಾಗೂ ಸಹೋದರಿ ಬಿಜೆಪಿಯ ಹಿರಿಯ ನಾಯಕರಾಗಿದ್ದು, ಅವರು ಬಂದರೆ ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.