ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತಿಯಾದ ತಾಪಮಾನದಿಂದ ಹೀಟ್ ವೇವ್, ಹೀಟ್ ಸ್ಟ್ರೋಕ್ ಉಂಟಾಗುವ ಸಾಧ್ಯತೆಗಳಿವೆ. ಬಿಸಿಲಿಗೆ ಮೈಯೊಡ್ಡುವ ಮೊದಲು ಎಚ್ಚರಿಕೆ ವಹಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಹವಾಮಾನ ನಿಯಂತ್ರಣ ಕಾರ್ಯಕ್ರಮ ನೋಡಲ್ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ನಾಗರಿಕರಿಗೆ ಎಚ್ಚರಿಸಿದ್ದಾರೆ.
ಕರಾವಳಿಯ ನೆಲ ಈಗ ಕಾದ ಕಬ್ಬಿಣದಂತಾಗಿದ್ದು, ಸುಡುಬಿಸಿಲು ನೆತ್ತಿ ಸುಡುತ್ತಿದೆ. ಈ ಬಿಸಿಲು ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಹೆಚ್ಚು ಅಪಾಯ ಉಂಟುಮಾಡುತ್ತಿದೆ.
ಹೀಟ್ ವೇ ಮೊದಲ ಲಕ್ಷಣ ಕಾಲು ಬಾವು. ಎರಡನೇ ಹಂತದಲ್ಲಿ ಮಾಂಸಖಂಡಗಳು ಹಿಡಿದುಕೊಳ್ಳುವುದು, ಮೂರನೇ ಹಂತದಲ್ಲಿ ತಲೆ ಸುತ್ತುವಿಕೆ ಕಂಡು ಬರುತ್ತದೆ. ಇನ್ನು ನಾಲ್ಕನೇ ಹಂತಕ್ಕೆ ತಲುಪಿದರೆ ಹೀಟ್ ಸ್ಟ್ರೋಕ್ ಉಂಟಾಗುತ್ತದೆ. ಹೀಟ್ ಸ್ಟ್ರೋಕ್ ಮನುಷ್ಯನಿಗೆ ಅತ್ಯಂತ ಅಪಾಯಕಾರಿಯಾಗಿದ್ದು, ಇದು ಹೆಚ್ಚಾಗಿ ಪರಿಣಾಮ ಬೀರುವುದು ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಎಂದು ಅವರು ಎಚ್ಚರಿಸಿದ್ದಾರೆ. ಜೊತೆಗೆ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳುವಂತೆಯೂ ಅವರು ಸಲಹೆ ನೀಡಿದ್ದಾರೆ.