ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಗೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎಲ್ಲಾ ಭಕ್ತಾದಿಗಳಿಗೂ ಅಡೆತಡೆಗಳಿಲ್ಲದೆ ಬಾಲರಾಮನ ದರುಶನ ಪಡೆಯುವಂತೆ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಇನ್ನಷ್ಟು ಅನುಕೂಲ ಕಲ್ಪಿಸಿದೆ.
ಒಂದು ಅಂದಾಜಿನ ಪ್ರಕಾರ ಈಗ ದಿನನಿತ್ಯ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಇಲ್ಲಿಗೆ ಭೇಟಿ ನೀಡಿದ 60ರಿಂದ 70 ನಿಮಿಷಗಳ ಒಳಗಾಗಿ ಬಾಲರಾಮನ ದರುಶನ ಪಡೆಯುಲು ಅನುಕೂಲವಾಗುವಂತೆ ಬೆಳಿಗ್ಗೆ 6.20ರಿಂದ ಆರಂಭವಾಗಿ ರಾತ್ರಿ 9.30ರ ವರೆಗೆ ದರುಶನ ಸಮಯ ನಿಗದಿಪಡಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಸ್ಟ್, ಮಂದಿರಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದೆ. ನಿರ್ದಿಷ್ಟ ಶುಲ್ಕ ಪಾವತಿಸಿ ಅಥವಾ ವಿಶೇಷ ಪಾಸ್ ಮೂಲಕ ವಿಶೇಷ ದರ್ಶನಕ್ಕೆ ಯಾವುದೇ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಿದೆ.
ಇದಲ್ಲದೆ ಮಂದಿರಕ್ಕೆ ಬರುವಾಗ ಹೂವು, ಹಾರ, ಪ್ರಸಾದ ಇತ್ಯಾದಿಗಳನ್ನು ತರದಂತೆ ಕೂಡಾ ಟ್ರಸ್ಟ್ ಮನವಿ ಮಾಡಿದ್ದು, ದರುಶನದ ಟಿಕೆಟ್ ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ವೆಬ್ಸೈಟ್ನಿಂದ ಕೂಡಾ ಪಡೆಯಬಹುದು ಎಂದು ಹೇಳಿದೆ.