ಹೊಸದಿಗಂತ ವರದಿ,ಮೈಸೂರು:
ಸಂವಿಧಾನದಲ್ಲಿ ರಾಜ ರಾಣಿ ಎಂಬ ಯಾವುದು ವಿಶೇಷ ಮಹತ್ವ ಇಲ್ಲ. ಎಲ್ಲರೂ ಪ್ರಜೆಗಳೇ ಇಷ್ಟನ್ನು ಮಾತ್ರ ನಾನು ಹೇಳಬಲ್ಲೇ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮಂಗಳವಾರ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರವ ಸುತ್ತೂರು ಶಾಖ ಮಠಕ್ಕೆ ಭೇಟಿ ನೀಡಿದರು.
ಅವರಿಗೆ ಪೂರ್ಣ ಕುಂಬ ಸ್ವಾಗತ ಕೋರಿದ ಮಠದ ಸಿಬ್ಬಂದಿ ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು. ಬಳಿಕ ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿ ಕೇಂದ್ರ ಸ್ವಾಮಿಯವರಿಗೆ ಶಾಲು,ಹಾರ ಹಾಕಿ ಆಶೀರ್ವಾದ ಪಡೆದ ಯದುವೀರ್, ಬಳಿಕ ಕೆಲವು ಹೊತ್ತು ಕುಶಲೋಪರಿ ವಿಚಾರಿಸಿ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ರಾಜ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ಹಾಗಾಗಿ ಆ ವಿಚಾರದ ಬಗ್ಗೆ ನಾನು ಹೇಗೆ ಪ್ರತಿಕ್ರಿಯೆ ಕೊಡಲಿ ಎಂದು ಜಾಣ್ಮೆಯ ಉತ್ತರ ನೀಡಿದರು.
ದೇಶದ ಸಂವಿಧಾನದಲ್ಲಿ ರಾಜ, ರಾಣಿ ಪಟ್ಟಕ್ಕೆ ಹೆಚ್ಚು ಮಹತ್ವ ಇಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಪ್ರಜೆಗಳು ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದರು.
ಸುತ್ತೂರು ಸ್ವಾಮಿಯವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಬೇರೆ ಯಾವ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮ ಚುನಾವಣಾ ಪ್ರಚಾರ ಎಂದಿನoತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ದಿನಾಂಕ ಇನ್ನೂ ಎರಡು ಮೂರು ದಿನಗಳಲ್ಲಿ ತೀರ್ಮಾನವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರಕ್ಕೆ ಬರುವ ಬಗ್ಗೆ ನನಗೆ ಇನ್ನೂ ಸದ್ಯಕ್ಕೆ ಮಾಹಿತಿ ಇಲ್ಲ ಎಂದು ಹೇಳಿದರು.
ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಶಾಸಕ ಎನ್.ಮಹೇಶ್, ಬಿಜೆಪಿ ಮೈಸೂರು ನಗರ ಮಾಜಿ ಅಧ್ಯಕ್ಷ ಡಾ.ಮಂಜುನಾಥ್, ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ಕುಮಾರ್, ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಮತ್ತಿತರರು ಹಾಜರಿದ್ದರು.
ಗಣಪತಿ ಶ್ರೀಗಳ ಭೇಟಿ
ಇದಕ್ಕೂ ಮುನ್ನಾ ಯದುವೀರ್ ಅವರು ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಅವಧೂತ ದತ್ತ ಪೀಠದ ಆಶ್ರಮಕ್ಕೆ ಭೇಟಿ ನೀಡಿ, ಶ್ರೀಗಣಪತಿ ಸಚ್ಚಿದಾನಂದಸ್ವಾಮಿಯವರ ಆರ್ಶೀವಾದ ಪಡೆದುಕೊಂಡು, ಕೆಲಕಾಲ ಸಮಲೋಚನೆ ನಡೆಸಿದರು. ಅವರಿಗೆ ಮಾಜಿ ಸಚಿವ ಎಸ್.ಎ.ರಾಮದಾಸ್, ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸಾಥ್ ನೀಡಿದರು. ಈ ವೇಳೆ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ವಕ್ತಾರ ಎಂ.ಎ.ಮೋಹನ್ ಮತ್ತಿತರರು ಹಾಜರಿದ್ದರು.
ಧರ್ಮಗುರು ಭೇಟಿ; ಬನ್ನಿಮಂಟಪ ಹೈವೇ ಸರ್ಕಲ್ ಬಳಿ ಇರುವ ಸನ್ಮಾರ್ಗಿ ನಿವಾಸದಲ್ಲಿ ಮೈಸೂರಿನ ಕ್ಯಾಥೋಲಿಕ್ ಧರ್ಮ ಕ್ಷೇತ್ರದ ಅತಿವಂದನೀಯ ಆರ್ಚ್ ಬಿಷಪ್ ಬರ್ನಾಡು ಮೋರಸ್ ರವರನ್ನು ಯದುವೀರ್ ಅವರು ಭೇಟಿ ಮಾಡಿ, ಮಾತುಕತೆ ನಡೆಸಿದರು. ಈ ವೇಳೆ ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯಾ ಅಧ್ಯಕ್ಷ ಡಾ.ಅನಿಲ್ ಥಾಮಸ್ ಮತ್ತಿತರರು ಉಪಸ್ಥಿತರಿದ್ದರು.