ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾಗಿದೆ. ಇದರ ನಡುವೆ ಸಾಮಾಜಿಕ ಹೋರಾಟಗಾರ, ಅರವಿಂದ್ ಕೇಜ್ರಿವಾಲ್ ಆಪ್ತರಾಗಿರುವ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಜೊತೆ ಹಲವು ಹೋರಾಟದಲ್ಲಿ ಪಾಲ್ಗೊಂಡಿರುವ ಅರವಿಂದ್ ಕೇಜ್ರಿವಾಲ್ ಮದ್ಯದ ವಿರುದ್ದ ಧ್ವನಿ ಎತ್ತಿದ್ದರು. ಹೋರಾಟ ಮಾಡಿದ್ದರು. ಆದರೆ ಈಗ ಅದೇ ಮದ್ಯ ನೀತಿ ಮಾಡಿ ಬಂಧನವಾಗಿದ್ದಾರೆ. ಕೇಜ್ರಿವಾಲ್ ಬಂಧನದಿಂದ ಬೇಸರವಾಗಿದೆ. ಈ ಬಂಧನ ಕೇಜ್ರಿವಾಲ್ ಸ್ವಯಂಕೃತ ಎಂದಿದ್ದಾರೆ.
ಈಗ ಅವರೇನು ಮಾಡುತ್ತಾರೆ? ಅಧಿಕಾರದ ಮುಂದೆ ಏನೂ ನಡೆಯುವುದಿಲ್ಲ. ಈಗ ಬಂಧನವಾಗಿದೆ. ಇನ್ನು ಕಾನೂನು ಪ್ರಕಾರ ಏನು ಆಗಬೇಕು ಅದು ನಡೆಯಲಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಲೋಕಪಾಲ ಬಿಲ್ ಜಾರಿಗೆ 2011ರಲ್ಲಿ ಅಣ್ಣಾ ಹಜಾರೆ ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಕಾಣಿಸಿಕೊಂಡ ಅರವಿಂದ್ ಕೇಜ್ರಿವಾಲ್ ಭಾರಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಅಣ್ಣಾ ಹಜಾರೆ ಜೊತೆಗೆ ಹಲವು ಹೋರಾಟದಲ್ಲಿ ಕೇಜ್ರಿವಾಲ್ ಮುಂಚೂಣಿಯಲ್ಲಿದ್ದರು. ಬಳಿಕ ಅಣ್ಣಾ ಹಜಾರೆಯಿಂದ ದೂರ ಸರಿದು ಆಮ್ ಆದ್ಮಿ ಪಾರ್ಟಿ ಕಟ್ಟಿ ಬೆಳೆಸಿದ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾದರು.