ದಿಗಂತ ವರದಿ ವಿಜಯನಗರ:
ಕಾಮ ದಹನ ನಿಮಿತ್ತ ವಿಶ್ವವಿಖ್ಯಾತ ಹಂಪಿಯಲ್ಲಿ ಮಂಗಳವಾರ ಹೋಳಿ ಹಬ್ಬದ ಸಂಭ್ರಮ ಕಳೆ ಗಟ್ಟಿತ್ತು. ಸ್ಥಳೀಯರು ಸೇರಿದಂತೆ ದೇಶ- ವಿದೇಶದಿಂದ ಆಗಮಿಸಿದ್ದ ಸಾವಿರಾರು ಪ್ರವಾಸಿಗರು ಬಣ್ಣ ಬಣ್ಣದ ಓಕಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಹೋಳಿ ಹುಣ್ಣಿಮೆ ನಿಮಿತ್ತ ತಾಲೂಕಿನ ಐತಿಹಾಸಿಕ ಹಂಪಿಯ ರಥ ಬೀದಿಯಲ್ಲಿ ಸೋಮವಾರ ತಡ ರಾತ್ರಿ ಕಾಮ ದಹನ ನೆರವೇರಿಸಲಾಯಿತು. ಮಂಗಳವಾರ ಬೆಳಗ್ಗೆ ಸ್ಥಳೀಯರೊಂದಿಗೆ ವಿದೇಶಿಗರು ಹೋಳಿ ಆಚರಿಸಿದರು.
ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು, ಹ್ಯಾಪಿ ಹೋಲಿ ಎಂದು ಹರ್ಷೋದ್ಘಾರ ಮೊಳಗಿಸಿದರು. ಡ್ರಮ್ಸ್, ಹಲಗೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನೆದರ್‌ಲ್ಯಾಂಡ್, ಇಂಗ್ಲೆಂಡ್, ಇಸ್ರೇಲ್, ಫ್ರಾನ್ಸ್ , ಸೇರಿದಂತೆ ವಿಶ್ವದ ನಾನಾ ದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು, ಬಣ್ಣದ ಓಕಳಿಯಲ್ಲಿ ಮಿಂದೆದ್ದರು.
ಮನಷ್ಯನಲ್ಲಿರುವ ಕಾಮ, ಕ್ರೋದ, ಮದ, ಮತ್ಯರ್ಯವನ್ನು ದಹಿಸುವುದೇ ಕಾಮ ದಹನದ ಮೂಲ ತಿರುಳು ಎಂಬುದನ್ನು ಅರಿತು ವಿದೇಶಿಗರು, ಹಿಂದು ಧರ್ಮದ ಮಹೋನ್ನತ ತತ್ವಕ್ಕೆ ತಲೆದೂಗಿದರು.