ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಯ ಹಿರಿಯ , ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿ ಅವರಿಗೆ ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಸ್ವತಃ ಅವರ ನಿವಾಸಕ್ಕೆ ಆಗಮಿಸಿದ ರಾಷ್ಟ್ರಪತಿಗಳು ಎಲ್‌ಕೆ ಆಡ್ವಾಣಿ ಅವರ ಕೊರಳಿಗೆ ಭಾರತರತ್ನ ಪುರಸ್ಕಾರ ತೊಡಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಹಾಜರಿದ್ದರು.
ಈ ವರ್ಷ ಒಟ್ಟು ಐವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪುರಸ್ಕಾರವನ್ನು ಘೋಷಣೆ ಮಾಡಲಾಗಿತ್ತು. ಚೌಧರಿ ಚರಣ್ ಸಿಂಗ್, ಮಾಜಿ ಪ್ರಧಾನಿ ಪಿವಿ ನರಸಿಂಹರಾವ್, ಬಿಹಾರ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂಎಸ್ ಸ್ವಾಮಿನಾಥನ್ ಅವರಿಗೆ ಈ ಪುರಸ್ಕಾರಣ ಘೋಷಿಸಲಾಗಿತ್ತು. ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮರಣೋತ್ತರವಾಗಿ ಪ್ರಶಸ್ತಿಗೆ ಭಾಜನರಾದ ಇವರ ಪರವಾಗಿ ಕುಟುಂಬ ಸದಸ್ಯರು ಗೌರವ ಸ್ವೀಕರಿಸಿದ್ದರು.
ಆದರೆ, ಅನಾರೋಗ್ಯದ ಕಾರಣದಿಂದಾಗಿ ಎಲ್‌ಕೆ ಆಡ್ವಾಣಿ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಿರಿಯ ಬಿಜೆಪಿ ನಾಯಕನ ನಿವಾಸಕ್ಕೆ ಆಗಮಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಧಾನಿ ಹೊರತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಈ ವೇಳೆ ಉಪಸ್ಥಿತರಿದ್ದರು.