ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ಹೊಟೇಲ್ ಕೊಠಡಿಯಲ್ಲಿ ಕೇರಳದ ದಂಪತಿ ಹಾಗೂ ಸ್ನೇಹಿತೆ ನಿಗೂಢವಾಗಿ ಸಾವನ್ನಪ್ಪಿದ ಘಟನೆಯ ಹಿಂದೆ ಹಲವು ಕುತೂಹಲಕಾರಿ ಮಾಹಿತಿಗಳು ಹೊರಬೀಳುತ್ತಿವೆ.
ಸಾವನ್ನಪ್ಪಿದ ಪೈಕಿ ಶಿಕ್ಷಕಿ ಆರ್ಯಗೆ ಮದುವೆ ನಿಗದಿಯಾಗಿದ್ದು, ಮುಂದಿನ ತಿಂಗಳು ಆಕೆ ತಿರುವನಂತಪುರಂನ ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದ ಬಳಿಯಿರುವ ವೈಕುಂಟಂ ಕಲ್ಯಾಣ ಮಂಟಪದಲ್ಲಿ ಹಸೆಮಣೆ ಏರಲಿದ್ದರು ಎಂಬ ಅಂಶ ಈಗ ಬಹಿರಂಗಗೊಂಡಿದೆ.
ಅತ್ತ ಈಕೆಯ ಪೋಷಕರು ವಿವಾಹ ಸಮಾರಂಭಕ್ಕೆ ಬಂಧು-ಮಿತ್ರರನ್ನು ಆಹ್ವಾನಿಸಲು ಪ್ರಾರಂಭಿಸಿದ್ದರೆ ಇತ್ತ ಈಕೆ ಹೊಟೇಲ್ ಕೊಠಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.
ಆರ್ಯ ನಿಶ್ಚಿತಾರ್ಥ ಕಳೆದ ವರ್ಷವೇ ನಡೆದಿತ್ತು. ಈಕೆ ತಿರುವನಂತಪುರದ ಖಾಸಗಿ ಶಾಲೆಯೊಂದರಲ್ಲಿ ಫ್ರೆಂಚ್ ಶಿಕ್ಷಕಿಯಾಗಿದ್ದರು. ಅಲ್ಲದೆ ಯಾರೊಂದಿಗೂ ಹೆಚ್ಚು ಮಾತನಾಡದ ಸ್ವಭಾವ ಕೂಡಾ ಈಕೆಯದ್ದಲ್ಲ ಎಂದು ಸಂಬಂಧಿಕರು ಹೇಳುತ್ತಾರೆ. ಈಕೆ ಕೆಲಸ ಮಾಡುತ್ತಿದ್ದ ತಿರುವನಂತಪುರಂನ ಶಾಲೆಯಲ್ಲಿಯೇ ದೇವಿ ಪರಿಚಯವಾಗಿದ್ದರು. ನಂತರ ಇಬ್ಬರೂ ಆತ್ಮೀಯ ಸ್ನೇಹಿತರಾದರು. ದೇವಿ ಶಿಕ್ಷಕಿ ವೃತ್ತಿ ತೊರೆದ ಬಳಿಕವೂ ಆರ್ಯ ಜೊತೆ ಪೋನ್ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು ಎಂಬುದೂ ಪೊಲೀಸ್ ತನಿಖೆಯಲ್ಲಿ ಖಚಿತಗೊಂಡಿದೆ.
ಆರ್ಯ ಮಾ7 ರಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಮಂದಿ ವಟ್ಟಿಯೂರ್ಕಾವ್ ಪೋಲೀಸರಿಗೆ ದೂರು ನೀಡಿದ್ದರು. ತನಿಖೆಯ ವೇಳೆ ಈಕೆ ನವೀನ್-ದೇವಿ ದಂಪತಿಯೊಂದಿಗೆ ಇರುವುದು ಪತ್ತೆಯಾಗಿತ್ತಲ್ಲದೆ, ತಿರುವನಂತಪುರಂ ವಿಮಾನ ನಿಲ್ದಾಣದಿಂದ ಕೋಲ್ಕತ್ತಾ ಮೂಲಕ ಗುವಾಹಟಿಗೆ ತೆರಳಿರುವುದನ್ನೂ ಪೊಲೀಸರು ಖಚಿತಪಡಿಸಿಕೊಂಡಿದ್ದರು. ಆಕೆಯನ್ನು ಅಲ್ಲಿ ಪತ್ತೆಹಚ್ಚಿ ಕರೆತರುವ ಮುನ್ನವೇ ಈ ಘಟನೆ ನಡೆದುಹೋಗಿದೆ.