ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ರಾಜಕೀಯ ಪಕ್ಷ ಅಧಿಕಾರದಿಂದ ಕೆಳಗಿಳಿದ ನಂತರದ ಆರು ವಾರಗಳ ವರೆಗೆ ಸರ್ಕಾರದ ವಕೀಲರನ್ನು ಬದಲಾಯಿಸಬಾರದು ಎಂದು ಸುಪ್ರೀಂ ಕೋರ್ಟ್, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಹೇಳಿದೆ.
ಒಂದು ರಾಜಕೀಯ ಪಕ್ಷದಿಂದ ಇನ್ನೊಂದು ರಾಜಕೀಯ ಪಕ್ಷಕ್ಕೆ ಅಧಿಕಾರ ವರ್ಗಾವಣೆಯಾದ ಬೆನ್ನಿಗೇ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಕೋರ್ಟ್‌ನಲ್ಲಿ ತಮ್ಮನ್ನು ಪ್ರತಿನಿಧಿಸುವ ವಕೀಲರ ತಂಡವನ್ನು ಬದಲಾಯಿಸಿರುವುದು ಕಳೆದ ಕೆಲವು ತಿಂಗಳಲ್ಲಿ ಗಮನಕ್ಕೆ ಬಂದಿದೆ. ಈ ಬೆಳವಣಿಗೆಯಿಂದ ಪ್ರಕರಣಗಳ ವಿಚಾರಣೆ ಮುಂದೂಡಬೇಕಾಗಿ ಬರುತ್ತಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಉಜ್ವಲ್ ಭುಇಯಾಂ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.
ತಮ್ಮ ವಕೀಲರ ತಂಡ ಬದಲಾಯಿಸುವ ಅಧಿಕಾರ ರಾಜ್ಯ, ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಇದ್ದರೂ ಬದಲಾವಣೆ ಮಾಡುವ ಪರಿಣಾಮ ನ್ಯಾಯಾಲಯದ ಕೆಲಸಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಪೀಠ ಹೇಳಿದೆ.