ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ (BJP) ಬಿದ್ದಿರುವ ಹಿನ್ನಲೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (Electronic Voting Machines) ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಚುನಾವಣಾ ಆಯೋಗಕ್ಕೆ (Election Commission of India) ಆದೇಶಿಸಿದೆ.
ಕೇರಳದ ಕಾಸರಗೋಡು ಕ್ಷೇತ್ರದಲ್ಲಿ ಇವಿಎಂ ಮೂಲಕ ಅಣಕು ಮತದಾನ ಮಾಡುವ ಸಂದರ್ಭದಲ್ಲಿ ಬಿಜೆಪಿಗೆ ಒಂದು ಹೆಚ್ಚು ಮತ ದಾಖಲಾಗಿದ್ದನ್ನು ಮಾಧ್ಯಮವೊಂದು ಪ್ರಕಟಿಸಿದ್ದ ವರದಿಯನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ ಮುಂದೆ ಪ್ರಸ್ತಾಪಿಸಿದರು.
ಹೀಗಾಗಿ ನ್ಯಾ.ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು ಇವಿಎಂ ಸಮಸ್ಯೆಯನ್ನು ಪರಿಶೀಲಿಸುವಂತೆ ಇಸಿಐಗೆ ಸೂಚಿಸಿತು.
ಅಣಕು ಮತದಾನ ನಡೆದ ವೇಳೆ 4 ಇವಿಎಂಗಳು ಮತ್ತು ವಿವಿಪ್ಯಾಟ್ಗಳ (VVPAT) ಹೋಲಿಕೆಯಲ್ಲಿ ಬಿಜೆಪಿಗೆ ಒಂದು ಹೆಚ್ಚುವರಿ ಮತ ಬಂದಿದೆ. ಮಾಧ್ಯಮಗಳ ವರದಿ ಆಧರಿಸಿ ವಕೀಲ ಪ್ರಶಾಂತ್ ಭೂಷಣ್ ಕೋರ್ಟ್ ಮುಂದೆ ಈ ವಿಚಾರ ಪ್ರಸ್ತಾಪಿಸಿದರು. ಮನವಿಯನ್ನು ಆಲಿಸಿದ ಪೀಠ ಚುನಾವಣಾ ಆಯೋಗದ ಸಲಹೆಗಾರ ಮಣಿಂದರ್ ಸಿಂಗ್ ಅವರಿಗೆ ಸೂಚನೆ ನೀಡಿದೆ.
ಪ್ರತಿ ಮತವನ್ನು ಚುನಾವಣಾ ಸಮಯದಲ್ಲಿ ವಿವಿಪ್ಯಾಟ್ ಸ್ಲಿಪ್ಗಳೊಂದಿಗೆ ತಾಳೆ ಮಾಡಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ಪ್ರತಿಯೊಂದು ಇವಿಎಂ ಮತವನ್ನು ವಿವಿಪ್ಯಾಟ್ ಸ್ಲಿಪ್ಗಳಿಗೆ ಹೋಲಿಸಿ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು.