ಶುಗರ್‌ ಜಾಸ್ತಿ ಆಗಲು ಜೈಲಿನಲ್ಲಿ ಕೇಜ್ರಿವಾಲ್ ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಾರೆ: ಇಡಿ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧಿತರಾಗಿ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೊಸ ಆರೋಪ ಮಾಡಿದ್ದಾರೆ.

ಕೇಜ್ರಿವಾಲ್ ಮಾವಿನಹಣ್ಣು, ಸಿಹಿತಿಂಡಿ ಮತ್ತು ಚಹಾ ಸೇವಿಸುವ ಮೂಲಕ ತಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ.
ಸಕ್ಕರೆ ಪ್ರಮಾಣ (Sugar Level) ಹೆಚ್ಚುತ್ತಿದ್ದು ಆರೋಗ್ಯ ಕಾರಣಗಳಿಗೆ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಇಡಿ ಕೇಜ್ರಿವಾಲ್ (Arvind Kejriwal) ವಿರುದ್ಧ ಆರೋಪಿಸಿದೆ.

ಕೇಜ್ರಿವಾಲ್ ಜಾಮೀನು ಪಡೆಯಲೆಂದೇ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮಧುಮೇಹವಿದೆ ಎಂದು ಹೇಳಿಕೊಂಡ ಕಾರಣ ಅವರಿಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ಅನುಮತಿಸಲಾಗಿದೆ. ಆದರೆ ಅವರು ಮಾವಿನಹಣ್ಣು, ಸಿಹಿತಿಂಡಿಗಳು ಮತ್ತು ಸಕ್ಕರೆಯನ್ನು ಸೇವಿಸುತ್ತಿದ್ದಾರೆ ಎಂದು ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಜಾರಿ ನಿರ್ದೇಶನಾಲಯ (ED) ವಕೀಲ ಜೊಹೆಬ್ ಹೊಸೈನ್ ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವೂ ತಿಹಾರ್ ಜೈಲಿನ ಅಧಿಕಾರಿಗಳಿಗೆ ಕೇಜ್ರಿವಾಲ್ ಅವರು ಸೇವಿಸುವ ಆಹಾರದ ಬಗ್ಗೆ ವರದಿ ನೀಡುವಂತೆ ಕೇಳಿದೆ. ಅಲ್ಲದೇ ಅರವಿಂದ್ ಕೇಜ್ರಿವಾಲ್ ಅವರ ವಕೀಲರಿಗೂ, ಎಎಪಿ ನಾಯಕನಿಗೆ ವೈದ್ಯರು ಸಲಹೆ ನೀಡಿದ ಆಹಾರ ಕ್ರಮದ ವರದಿ ನೀಡುವಂತೆ ನ್ಯಾಯಾಲಯ ಕೇಳಿದೆ.

ಅರವಿಂದ್ ಕೇಜ್ರಿವಾಲ್ ಅವರು ಒಬ್ಬ ಡಯಾಬಿಟೀಸ್ ಪೇಶೆಂಟ್‌ ಆಗಿಯೂ ಕೂಡ, ತಿಳಿದು ತಿಳಿದೇ, ಸಕ್ಕರೆ ಹಾಕಿದ ಟೀ, ಬಾಳೆಹಣ್ಣು, ಸಿಹಿ ತಿನಿಸು, ಪುರಿ, ಆಲೂ ಸಬ್ಜಿ, ಮುಂತಾದವುಗಳನ್ನು ನಿರಂತರವಾಗಿ ಸೇವಿಸುತ್ತಿದ್ದಾರೆ. ಇದರಿಂದ ರಕ್ತದ ಸಕ್ಕರೆ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತದೆ ಎಂಬುದು ಕೂಡ ಅವರಿಗೆ ತಿಳಿದಿದೆ ಎಂದು ಇಡಿ ಪರ ವಕೀಲರು ನ್ಯಾಯಾಧೀಶರ ಮುಂದೆ ದೂರಿದ್ದಾರೆ.

ವೈದ್ಯಕೀಯ ತುರ್ತುಸ್ಥಿತಿ ಆಹ್ವಾನಿಸುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದಾರೆ, ಈ ಮೂಲಕ ಕೋರ್ಟ್‌ನ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಜೈಲಿನ ವೈದ್ಯರು ಪ್ರತಿದಿನವೂ ಎರಡು ಬಾರಿ ಕೇಜ್ರಿವಾಲ್ ಅವರ ಬ್ಲಡ್ ಶುಗರ್ ತಪಾಸಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ವೈದ್ಯಕೀಯ ವರದಿಯನ್ನು ಉಲ್ಲೇಖಿಸಿದ ಇಡಿ ವಕೀಲರು, ಕೇಜ್ರಿವಾಲ್ ಏಪ್ರಿಲ್ 1 ರಂದು ಜೈಲಿಗೆ ಬರುವ ವೇಳೆ ಕೇಜ್ರಿವಾಲ್ ಬ್ಲಡ್ ಶುಗರ್ ಪ್ರಮಾಣ 139 ಎಂಜಿ /ಡಿಲ್ ಇತ್ತು. ಆದರೆ ಏಪ್ರಿಲ್ 14 ರಂದು ತಪಾಸಣೆ ಮಾಡಿದಾಗ ದಾಖಲೆಯ ಏರಿಕೆ ಆಗಿದ್ದು, 276 ಎಂಜಿ ದಾಖಲಾಗಿದೆ ಎಂದು ಹೇಳಿದ್ದಾರೆ.

ಆದರೆ ಕೇಜ್ರಿವಾಲ್ ವಕೀಲರು ಇದನ್ನು ನಿರಾಕರಿಸಿದ್ದು, ಇಡಿ ಅಧಿಕಾರಿಗಳು ಮಾಧ್ಯಮಕ್ಕೋಸ್ಕರ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಶುಗರ್ ಇರುವವರಿಗೆ ಈ ರೀತಿ ಆಹಾರ ಯಾರಾದರೂ ನೀಡುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿಕೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!