ಹೊಸದಿಗಂತ ವರದಿ, ವಿಜಯನಗರ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ, ಗೃಹ ಸಚಿವರು ತಮ್ಮ ಸ್ಥಾನವನ್ನು ತೊರೆಯಬೇಕು ಎಂದು ಮಾಜಿ ಸಚಿವ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಒತ್ತಾಯಿಸಿದರು.
ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಖಂಡಿಸಿ ಹೊಸಪೇಟೆಯಲ್ಲಿ ಸೋಮವಾರ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಕಾನೂನಿನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ಜಂಗಲ್ ರಾಜ್ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ನೇಹಾ ಕೊಲೆ, ಗದಗಿನಲ್ಲಿ ನಾಲ್ವರು, ಬೆಂಗಳೂರಿನಲ್ಲಿ ಜೋಡಿ ಕೊಲೆ ಹಾಗೂ ಬೀದರ್‌ನಲ್ಲಿ ಒಬ್ಬರು ಸರಣಿಯಾಗಿ ಹತ್ಯೆಯಾಗಿದ್ದಾರೆ. ರಾಜ್ಯಾದ್ಯಂತ ಕೊಲೆ, ಅತ್ಯಾಚಾರ, ದೌರ್ಜನ್ಯಗಳು ಹೆಚ್ಚುತ್ತಿವೆ. ಹೆಣ್ಣು ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಲು ಜನ ಹಿಂದೇಟು ಹಾಕುವಂತಾಗಿದೆ. ಆದರೆ, ಕೊಲೆ ಪ್ರಕರಣ ಅವರ ವೈಯಕ್ತಿಕ ಎನ್ನುವ ಮೂಲಕ ಗೃಹ ಸಚಿವರು ಬೇಜವಾಬ್ದಾರಿತನ ತೋರಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತ ತುಘುಲಕ್ ದರ್ಬಾರ್ ಎಂಬoತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಬಿಜೆಪಿ ಜಿಲ್ಲಾ ಕಚೇರಿಯಿಂದ ತಾಲೂಕು ಕಚೇರಿ ವರೆಗೆ ನಡೆದ ಭೃಹತ್ ಪ್ರತಿಭಟನಾ ಮೆರವಣಗೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕರ ಕೂಗಿ ಆಕ್ರೊಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಬಿಜೆಪಿ ಎಸ್ ಟಿ ಮೋರ್ಚ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಯುವ ರಾಜ್ಯ ಕೋಶಾಧ್ಯಕ್ಷ ಸಿದ್ದಾರ್ಥ ಸಿಂಗ್, ಯುವ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ್, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುವರ್ಣ ಅರುಂಡಿ, ಉಪಾಧ್ಯಕ್ಷರಾದ ರೇಖಾರಾಣಿ, ದೀನಾ ಮಂಜುನಾಥ, ಭಾರತಿ ಪಾಟೀಲ, ಮೀರಾಬಾಯಿ, ಮಂಡಲ ಅಧ್ಯಕ್ಷೆ ಕವಿತಾ ಪ್ರಮುಖರಾದ ಉಮಾ, ಪ್ರಿಯಾಂಕ ಜೈನ್ ಮತ್ತಿತರರು ಪಾಲ್ಗೊಂಡಿದ್ದರು.