ಭ್ರಷ್ಟಾಚಾರಿಗಳಿಂದ ತುಂಬಿದ ಇಂಡಿಯಾ ಒಕ್ಕೂಟ: ಜೆಪಿ ನಡ್ಡಾ

ಹೊಸದಿಗಂತ ವರದಿ, ಕಲಬುರಗಿ :

ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷ ರಚನೆ ಮಾಡಿದಂತಹ ಇಂಡಿಯಾ ಒಕ್ಕೂಟದ ಸರ್ವ ಪಕ್ಷಗಳು, ಭ್ರಷ್ಟಾಚಾರದ ಪಕ್ಷಗಳಾಗಿವೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಆರೋಪಿಸಿದ್ದಾರೆ.

ನಗರದ ಸುಪರ್ ಮಾರ್ಕೆಟ್,ನಲ್ಲಿ ಅದ್ಧೂರಿ ರೋಡ್ ಶೋ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂಡಿಯಾ ಅಲೈನ್ಸ್ ಇದೊಂದು ಘಮಂಡಿ ಅಲೈನ್ಸ್ ಆಗಿದ್ದು,ಅದರೊಳಗಿನ ಎಲ್ಲಾ ಪಕ್ಷಗಳ ನಾಯಕರು ಒಂದಿಲ್ಲೊಂದು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರಾಗಿದ್ದಾರೆ ಎಂದರು.

ಕಳೆದ ಹತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ನಾವು ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಿದ್ದರೆ,ಇವರು ಭ್ರಷ್ಟಾಚಾರವನ್ನು ಎಸಗುತ್ತಿದ್ದಾರೆ. ಭ್ರಷ್ಟಾಚಾರದ ತನಿಖೆಗೆ ಆದೇಶ ಮಾಡಿದರೆ, ಅದನ್ನು ವಿರೋಧಿಸಲು ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್,ನ ಕಳೆದ ೫೦ ವರ್ಷಗಳ ಆಡಳಿತದ ಅವಧಿಯಲ್ಲಿ ಕಲ್ಲಿದ್ದಲು ಹಗರಣ, ೨ಜಿ ಹಗರಣ, ಕಾಮನ್ವೆಲ್ತ್ ಹಗರಣ, ಹೆಲಿಕಾಪ್ಟರ್ ಹಗರಣ ಸೇರಿದಂತೆ ಹಲವು ಹಗರಣ ಮಾಡಿ, ಕಾಂಗ್ರೆಸ್ ಹಲವು ನಾಯಕರು ಇಂದು ಬೆಲ್ ಮೇಲೆ ತಿರುಗಾಟ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮಾಡಲಾರದಂತಹ ಹಗರಣ ದೇಶದಲ್ಲಿ ಯಾವುದು ಉಳಿದಿಲ್ಲ. ಹಗರಣ ಮಾಡಿ ಮಾಡಿ ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಿ.ಚಿದಂಬರಂ, ಇಂಡಿಯಾ ಒಕ್ಕೂಟದ ಲಾಲೂ ಪ್ರಸಾದ್ ಯಾದವ್, ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಇಂಡಿಯಾ ಒಕ್ಕೂಟದ ಹಲವು ನಾಯಕರು ಇಂದು ಅರ್ಧದಷ್ಟು ಜೈಲಿನಲ್ಲಿ ಇದ್ದರೆ,ಇನ್ನೂ ಅರ್ಧದಷ್ಟು ಬೆಲ್ ಮೇಲೆ ಹೊರಗಡೆ ಇದ್ದಾರೆ ಎಂದು ಹೇಳಿದ ಅವರು, ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು, ದೇಶವನ್ನು ಸುಭದ್ರವಾಗಿ ಮುನ್ನೆಡೆಸಲು ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕು ಹೀಗಾಗಿ ತಾವೆಲ್ಲರೂ ಬರುವ ಮೇ ೭ರಂದು ನಮ್ಮಅಭ್ಯರ್ಥಿ ಉಮೇಶ್ ಜಾಧವ್ ಅವರನ್ನು ಗೆಲ್ಲಿಸುವ ಮೂಲಕ ಅವರನ್ನು ದೆಹಲಿಗೆ ಕಳಿಸಬೇಕು ಎಂದು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!