ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸುಳ್ಳು, ಅಪಪ್ರಚಾರ ಮತ್ತು ಅನುಮಾನದ ಮೂಲಕವೇ ಬಿಜೆಪಿ ಪಕ್ಷವನ್ನು ಸೋಲಿಸಲು ಯತ್ನಿಸುತ್ತಿದೆ. ಆದರೆ, ಜನರಿಗೆ ನರೇಂದ್ರ ಮೋದಿಯ ತಾಕತ್ತು, ಪಾರದರ್ಶಕ ಆಡಳಿತದ ಮೇಲೆ ನಂಬಿಕೆ ಇರುವುದರಿಂದ ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷವು ನೀತಿ, ನೇತೃತ್ವ ಮತ್ತು ನಿಯತ್ತು ಈ ಮೂರು ಅಂಶಗಳ ಮೇಲೆ ಬಲವಾದ ನಂಬಿಕೆ ಇಟ್ಟುಕೊಂಡಿದೆ. ನಮ್ಮದು ದೇಶ ವಿಕಾಸದ ನೀತಿ. ಇಡೀ ವಿಶ್ವವೇ ಮೆಚ್ಚಿರುವ ಮೋದಿಯವರು ನಮ್ಮ ಪಕ್ಷದ ನೇತೃತ್ವ ವಹಿಸಿದ್ದಾರೆ. ಅತ್ಯಂತ ಪರಿಶ್ರಮದಿಂದ ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿದ್ದಾರೆ. ಆದ್ದರಿಂದ ಜನರು ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
ಬಿಜೆಪಿಯು ಅಂತ್ಯೋದಯದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳನ್ನು ತಲುಪಿಸಲು ಪ್ರಯತ್ನಿಸುವ ಪಕ್ಷವಾಗಿದೆ. ದೇಶದ ಜನರು ಬೇಡುವ ಸ್ಥಿತಿಯಿಂದ ನೀಡುವ ಸ್ಥಿತಿಗೆ ಬರಬೇಕೆಂಬುದು ಮೋದಿಯವರ ಆಶಯವಾಗಿದೆ. ಸುಧಾರಣೆ, ಸಂರಕ್ಷಣೆ, ಸಾಂಸ್ಕೃತಿಕ, ಸಮೃದ್ಧಿ ಮತ್ತು ಅಭಿವೃದ್ಧಿಯ ಪರಿಕಲ್ಪನೆಯನೆಯಲ್ಲಿ ಬಿಜೆಪಿ ಯೋಜನೆ ರೂಪಿಸುತ್ತದೆ. ಈಗಾಗಲೇ ಭಾರತ ಜಾಗತಿಕವಾಗಿ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಮುಂಬರುವ 2 ವರ್ಷಗಳಲ್ಲಿ ಜಗತ್ತಿನ ನಂಬರ್-1 ಆರ್ಥಿಕ ಬಲಾಢ್ಯ ದೇಶವಾಗಿ ಬೆಳೆಯಲು ಬಿಜೆಪಿ ಯೋಜನೆ ರೂಪಿಸಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ಸಿಗರು ಮೋದಿಯವರ ವಿರುದ್ಧ ತೆರಿಗೆ, ಬರಪರಿಹಾರ ಹಾಗೂ ಮೀಸಲಾತಿ ವಿಷಯದಲ್ಲಿ ಅಪಪ್ರಚಾರ ಮಾಡುವ ಮೂಲಕ ಮತ ವಿಭಜಿಸಲು ಯತ್ನಿಸುತ್ತಿದ್ದಾರೆ. ಮೋದಿಯವರು ರಾಜ್ಯಕ್ಕೆ 5.29 ಲಕ್ಷ ಕೋಟಿ ರೂ. ತೆರಿಗೆ ಪಾಲು ನೀಡಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಇಷ್ಟು ಹಣ ಬಂದಿರಲಿಲ್ಲ. ಕಳೆದ 10 ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರವಾಗಿ 4,571 ಕೋಟಿ ರೂ. ಹಣ ನೀಡಲಾಗಿದೆ. ಮೋದಿಯವರು ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಿಸಿದರು. ಅಂಬೇಡ್ಕರ್ ಆಶಯ ಮತ್ತು ಸಂವಿಧಾನವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಆದರೂ ಕಾಂಗ್ರೆಸ್ ಸುಳ್ಳನ್ನೇ ಮನೆದೇವರನ್ನಾಗಿಸಿಕೊಂಡು ಅಪಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ತಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂಬುದೇ ಗೊತ್ತಿಲ್ಲ. ರಾಹುಲ್ ಗಾಂಧಿ ಹೆಸರು ಹೇಳಿದರೆ ಮತ ಸಿಗುವುದಿಲ್ಲ ಎಂಬ ಸತ್ಯ ಕಾಂಗ್ರೆಸ್ಸಿಗೆ ತಿಳಿದಿದೆ. ಕಾಂಗ್ರೆಸ್ಸಿನವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬರಗಾಲದಲ್ಲಿ ಎಷ್ಟು ಗೋಶಾಲೆ ತೆರೆದಿದ್ದಾರೆ, ಎಷ್ಟು ಮೇವು ನೀಡಿದ್ದಾರೆ? ಎಂಬುದರ ಬಗ್ಗೆ ಲೆಕ್ಕ ಕೊಡಲಿ. ಕಳೆದ 7 ತಿಂಗಳಿನಿಂದ ಹಾಲು ಉತ್ಪಾದಕರಿಗೆ ಸಬ್ಸಿಡಿ ಹಣ ನೀಡಿಲ್ಲ. 108 ಆಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ವೇತನ ಕೊಟ್ಟಿಲ್ಲ. ಗ್ಯಾರಂಟಿ ಯೋಜನೆಗಳಿಂದ ಇವರ ಖಜಾನೆ ಖಾಲಿಯಾಗಿದೆ ಎಂದು ಅವರು ದೂರಿದರು.
ಸಂಸದ ಡಾ.ಜಿ.ಎಂ.ಸಿದ್ದೇಶ್ವರ್, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಎನ್.ರವಿಕುಮಾರ್, ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್, ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಮುಖಂಡರಾದ ಅಣ್ಣೇಶ್ ಐರಣಿ, ಎಸ್.ಎಂ.ವೀರೇಶ್ ಹನಗವಾಡಿ, ಬಿ.ಎಂ.ಸತೀಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.