ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದಲ್ಲಿ ನಿನ್ನೆ ಮನೆಯಿಂದ ಕಾಣೆಯಾಗಿದ್ದ ಮೂವರು ಮಕ್ಕಳು ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದಲ್ಲಿ ಮೂವರು ಮಕ್ಕಳ ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಗದಗ ಮೂಲದ ಅನುಷ್ಕಾ ಅನೀಲ ದಹಿಂಡೆ (9) ವಿಜಯ ಅನಿಳ ದಹಿಂಡೆ (7) ಮತ್ತು ವಿಜಯಪುರ ಮೂಲದ ಮಿಹಿರ್ ಶ್ರೀಕಾಂತ ಜಾನಗೌಳಿ (7) ಮೃತರು. ಗದಗ ಮೂಲದ ಅನುಷ್ಕಾ ಹಾಗೂ ವಿಜಯ ಬೇಸಿಗೆ ರಜೆಗಾಗಿ ವಿಜಯಪುರದಲ್ಲಿರುವ ಮಾವನ ಮನೆಗೆ ಬಂದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿಜಯಪುರದ ಚಾಬಕಸಾಬ್ ದರ್ಗಾದ ಬಳಿಯ ಮನೆಯ ಮುಂದೆ ಒಂಟೆ ಸವಾರಿ ಮಾಡಿದ್ದಾರೆ. ನಂತರ ಒಂಟೆಗಳನ್ನು ಹುಡುಕಿಕೊಂಡು ಮನೆಯಿಂದ ಹೋಗಿದ್ದರು. ಎಷ್ಟು ಹೊತ್ತಾದರೂ ಮಕ್ಕಳು ಮನೆಗೆ ಬಾರದ ಕಾರಣ ಎಪಿಎಂಸಿ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದಾರೆ.
ನಿನ್ನೆಯಿಂದಲೇ ಕುಟುಂಬಸ್ಥರು ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಇಂದು ಮಧ್ಯಾಹ್ನದ ವೇಳೆ ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದ ನೀರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.