ದಿಗಂತ ವರದಿ ರಾಯಚೂರು :
ಕಾದು ಕೆಂಡವಾಗಿದ್ದ ಇಳೆಗೆ ತಂಪರೆಗಿದ ಭಾನುವಾರ ಮಧ್ಯರಾತ್ರಿ ಆದ ಮಳೆ. ಬಿಸಿಲ ನಾಡು ರಾಯಚೂರು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದೆ.
ಜಿಲ್ಲಾ ಕೇಂದ್ರ ರಾಯಚೂರಲ್ಲಿ ಮಧ್ಯರಾತ್ರಿ 2 ಗಂಟೆಗೆ ಭಾರಿ ಗಾಳಿ, ಗುಡುಗು, ಶಿಡಿಲು ಸಹಿತ ಆರಂಭವಾದ ಮಳೆ ಕನಿಷ್ಟ ಎರಡು ಗಂಟೆಗಳ ಕಾಲ ಉತ್ತಮವಾಗಿ ಆಗುವ ಮೂಲಕ ಬಿಸಿಲಿಗೆ ಬೆಂಡಾಗಿದ್ದ ಜನತೆಗೆ ತಂಪಾದ ವಾತಾವರಣವನ್ನು ನೀಡುವ ಮೂಲಕ ನೆಮ್ಮದಿಯನ್ನು ತಂದಿದೆ.
ನಗರದಲ್ಲಿ ಆದ ವರ್ಷದ ಮೊದಲ ವರ್ಷಧಾರೆಯಿಂದ ನಗರದಲ್ಲಿನ ಚರಂಡಿಗಳು ಹಾಗೂ ರಾಜ ಕಾಲುವೆಗಳು ತುಂಬಿ ರಸ್ತೆಯ ನೇಲೆ ಹರಿಯುವ ಮೂಲಕ ಕೆಲ ಗಂಟೆಗಳ ಕಾಲ ಚರಂಡಿಯಾವುದು ರಸ್ತೆಯಾವುದು ಎನ್ನುವುದು ತಿಳಿಯದೇ ಸಾರ್ವಜನಿಕರು ಪ್ರಮುಖವಾಗಿ ವಾಹನ ಸವಾರರು ವಾಹನ ಚಲಾಯಿಸುವುದಕ್ಕೆ ಪರದಾಡುವಂತಾಯಿತು.
ಚರಂಡಿಗಳು ತುಂಬಿ ಹರಿದಿದ್ದರಿಂದ ಚರಂಡಿಗಳಲ್ಲಿನ ತ್ಯಾಜ್ಯ ಪ್ರಮುಖವಾಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನಲ್ಲದೆ ಕೊಳಚೆ ಮಿಶ್ರಿತ ಕೆಸರು ರಸ್ತೆಯ ಮೇಲೆಲ್ಲ ನಿಂತಿದ್ದರಿಂದ ಪಾದಚಾರಿಗಳಿಕೆ ಬಹಳ ಕಿರಿಕಿರಿಯನ್ನುಂಟು ಮಾಡಿತು. ಪಾದಚಾರಿಗಳು ರಸ್ತೆಯ ಒಂದು ಬದಿಯಿಂದ ಇದನ್ನೊಂದು ಬದಿಗೆ ಹೋಗುವುದಕ್ಕೆ ದ್ವಿಚಕ್ರ ವಾಹನಗಳ ಸಹಾಯ ಪಡೆದುಕೊಳ್ಳುತ್ತಿದ್ದರು. ಇಲ್ಲವೆ ಬೇರೆ ಮಾರ್ಗವಾಗಿ ತೆರಳುತಗತಿದ್ದರು.
ನಗರದ ಯಕಲಾಸಪುರ ರಸ್ತೆಯಲ್ಲಿನ ಚರಂಡಿಗಳು ತುಂಬಿ ರಸ್ತೆಯ ಇಕ್ಕೆಲೆಗಳಲ್ಲಿನ ಮನೆ ಮತ್ತು ಮಂದಿರಗಳಿಗೆ ನೀರು ನುಗ್ಗಿ ಕೆಲ ಗಂಟೆಗಳ ಕಾಲ ಜನರು ಬಹಳ ತೊಂದರೆಯನ್ನು ಅನುಭವಿಸುವಂತೆ ಮಾಡಿತು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಛಾವಣಿಗಳ ನಿರ್ವಹಣೆ ಇಲ್ಲದೆ ಎಲ್ಲೆಂದರಲ್ಲಿ ಸೋರಿದ್ದರಿಂದ ರೈತರು ತಂದು ಹಾಕಿದ್ದ ನೂರಾರು ಟನ್ ಭತ್ತದ ರಾಸಿಗಳನ್ನು ನೀರಿನಲ್ಲಿ ತೋಯಿಯುವಂತೆ ಮಾಡಿದೆ.
ಮಧ್ಯರಾತ್ರಿ ಮಳೆ ಆಗಿದ್ದರಿಂದ ಅಂಗಡಿಗಳಲ್ಲಿ ದಲಾಲರು ಹಾಗೂ ಹಮಾಲರು ಇಲ್ಲದ ಕಾರಣಕ್ಕೆ ಎಪಿಎಂಸಿ ಆವರಣದಲ್ಲಿದ್ದ ಬಹುತೇಕ ಭತ್ತದ ರಾಸಿಗಳು ನೀರಿನಲ್ಲಿ ನೆಂದು ರೈತರಿಗೆ ದೊಡ್ಡ ಹಾನಿಯನ್ನು ಮಾಡಿದೆ.ಹೀಗಾಗುತ್ತಿರುವುದು ಇದೇ ಮೊದಲೇನಲ್ಲ ಇದು ಪ್ರತಿ ವರ್ಷದ ಗೋಳು ಇದನ್ನು ಸರಿಪಡಿಸುವುದಕ್ಕೆ ಎಪಿಎಂಸಿ ಆಡಳಿತ ಮಂಡಳಿ ಮುಂದಾಗದಿರುವುದು ದುರದೃಷ್ಟಕರ ಸಂಗತಿ. ರೈತರ ಹಿತ ದೃಷ್ಟಿಯಿಂದಾದರೂ ಛಾವಣಿಗಳ ದುರಸ್ತಿ ಕಾರ್ಯವನ್ನು ಅಧಿಕಾರಿಗಳು ಮಾಡುವರೆ ಕಾದುನೋಡಬೇಕು.