ಹೊಸದಿಗಂತ ವರದಿ, ರಾಯಚೂರು :
ರಾತ್ರಿ ಸುರಿದ ಮಳೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾದ ಹಿನ್ನೆಲೆ ರಾಯಚೂರಿನ ಕೆಲವೆಡೆ ಸಂಚಾರಿ ಪೊಲೀಸರು ರಸ್ತೆಯಲ್ಲಿನ ತಗ್ಗು ಗುಂಡಿಗಳನ್ನು ರಿಪೇರಿ ಮಾಡಿಸುವ ಕಾರ್ಯ ಮಾಡಿದ್ದಾರೆ.
ರಾತ್ರಿ ಆದ ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿದ್ದರಿಂದ ತಗ್ಗು, ಗುಂಡಿಗಳಿರುವುದು ತಿಳಿಯದೇ ವಾಹನ ಸವಾರರು ಬಹಳ ತೊಂದರೆ ಅನುಭವಿಸುವುದನ್ನು ನಿಸಿದ ಸಂಚಾರಿ ಪೊಲೀಸರು ತಮ್ಮ ಸ್ವಂತ ಖರ್ಚಿನಲ್ಲಿ ತಗ್ಗುಗುಂಡಿಗಳಿಗೆ ಕೆಮ್ಮಣ್ಣು ಹಾಕಿಸಿ ರಸ್ತೆ ರಿಪೇರಿ ನಡೆಸಿದ ಸಿಬ್ಬಂದಿಗಳ ಈ ಸಾಮಾಜಿಕ ಕಳಕಳಿಗೆ ಈಗ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಗರದ ಕನಕದಾಸ ವೃತ್ತದ ಬಳಿ ಹದಗೆಟ್ಟಿರುವ ರಸ್ತೆಯನ್ನು ಮಣ್ಣು ಹಾಕಿಸಿ ಜೆಸಿಬಿ ಬಳಸಿ ರಸ್ತೆ ರಿಪೇರಿ ಮಾಡಿಸುತ್ತಿರುವದನ್ನು ಸಾರ್ವಜನಿಕರು ಕೆಲಕಾಲ ನಿಂತು ಮೆಚ್ಚುಗೆ ವ್ಯಕ್ತಪಡಿಸಿ ಮುಂದೆ ಸಾಗುತ್ತಿದ್ದರು.
ತೆಗ್ಗು ಗುಂಡಿಗಳಲ್ಲಿ ನೀರು ನಿಂತು ಓಡಾಡಲು ಪರದಾಡುತ್ತಿರುವ ಬೈಕ್ ಸವಾರರು. ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದ್ದರೂ ದುರಸ್ತಿ ಕಾರ್ಯನಡೆಯದ ಹಿನ್ನೆಲೆ ರೋಸಿ ಹೋಗಿರುವ ಪ್ರಯಾಣಿಕರು. ನಿತ್ಯ ಪ್ರಯಾಣಿಕರ ಪರದಾಟ ನೋಡಿ ಸ್ವಂತ ಖರ್ಚಿನಲ್ಲಿ ರಿಪೇರಿಗೆ ಮುಂದಾದ ನಗರ ಸಂಚಾರಿ ಪೊಲೀಸರು.