ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಮಾಜಿ ಸಚಿವ ಎಚ್ಡಿ ರೇವಣ್ಣ (HD Revanna case) ಅವರಿಗೆ ಜಾಮೀನು (Bail) ಮಂಜೂರಾಗಿದೆ. ಇನ್ನೊಂದು ಪ್ರಕರಣದಲ್ಲಿ ಈಗಾಗಲೇ ಜಾಮೀನು ದೊರೆತಿರುವುದರಿಂದ ರೇವಣ್ಣಗೆ ಬಿಗ್ ರಿಲೀಫ್ ದೊರೆತಂತಾಗಿತ್ತು. ಇದೀಗ ಎಸ್ಐಟಿ ಶಾಕ್ ನೀಡಿದ್ದು, ಜಾಮೀನು ಅರ್ಜಿಯನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಮೊರೆ ಹೋಗಿದೆ.
ಜನಪ್ರತಿನಿಧಿಗಳ ಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಎಸ್ಐಟಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಆದೇಶವನ್ನು ಪ್ರಶ್ನೆ ಮಾಡಲಿದೆ.
ಈ ಸಂಬಂಧ ಜೆಡಿಎಸ್ ಮುಖಂಡ ಎ.ಪಿ. ರಂಗನಾಥ್ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ವಾರ ವಾದ – ಪ್ರತಿವಾದಗಳು ನಡೆದಿದ್ದವು. ಹೊಸ ಪ್ರಯೋಗ ಮಾಡಲು ಹೋಗಿ ಎಸ್ಐಟಿಗೆ ಮುಖಭಂಗವಾಗಿದೆ. ಇವತ್ತು ನ್ಯಾಯಾಲಯ ಎಸ್ಐಟಿಯ ನಡೆಯನ್ನು ವಜಾ ಮಾಡಿದೆ. ಇದೇ ಎಸ್ಐಟಿಯ ಎಸ್ಪಿಪಿ ಹೆಚ್ಚುವರಿ ಸೆಕ್ಷನ್ ಸೇರಿಸಲ್ಲವೆಂದು ಕೋರ್ಟ್ಗೆ ಹೇಳಿದ್ದರು. ಕೊನೆಗೆ 354 ಕೇಸ್ನಲ್ಲಿನ ಜಾಮೀನು ತೆಗೆದುಕೊಳ್ಳಲು ಬಂದಾಗ 376 ಸೇರಿಸಿದ್ದೇವೆ ಎಂದು ಹೇಳಿಕೊಂಡರು. ರೇವಣ್ಣ ಪರ ಹಿರಿಯ ಪರ ವಕೀಲ ಸಿ.ವಿ. ನಾಗೇಶ ವಾದ ಮಂಡಿಸಿ, ಎಸ್ಐಟಿ ತಪ್ಪುಗಳನ್ನು ಕೋರ್ಟ್ ಗಮನಕ್ಕೆ ತಂದರು. ಇವತ್ತು ನಮಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಐದು ಲಕ್ಷ ರೂಪಾಯಿಯ ಬಾಂಡ್ ಮೇಲೆ ರೇವಣ್ಣಗೆ ಜಾಮೀನು ಸಿಕ್ಕಿದೆ. ಕೆ.ಆರ್. ನಗರ ಕೇಸ್ನಲ್ಲಿ ರೇವಣ್ಣ ಅವರಿಗೆ ಸಿಕ್ಕಿದ ಜಾಮೀನು ಆದೇಶವನ್ನು ಪ್ರಶ್ನಿಸಿ ಎಸ್ಐಟಿ ಹೈಕೋರ್ಟ್ ಮೊರೆ ಹೋಗಿರುವುದು ಸರ್ಕಾರದ ಹುನ್ನಾರವಾಗಿದೆ. ಇದರಲ್ಲಿ ರೇವಣ್ಣ ಅವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಅವರ ಕಾನೂನು ಹೋರಾಟಕ್ಕೆ ನಾವು ಕೂಡ ಸಮರ್ಥವಾಗಿ ಹೈಕೋರ್ಟ್ನಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.