March 11, 2026
Wednesday, March 11, 2026
spot_img

ಬೆಂಕಿ ಕೆನ್ನಾಲಿಗೆಗೆ 10 ಅಂಗಡಿಗಳು ಭಸ್ಮ: ವ್ಯಾಪಾರಿಗಳ ಬದುಕು ಬೀದಿಗೆ!

ಹೊಸದಿಗಂತ ಬೀದರ್

ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಒಟ್ಟು ಹತ್ತು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕೋಟ್ಯಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಬೂದಿಯಾಗಿದ್ದು, ವ್ಯಾಪಾರಿಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಅನೀಲ ಮೀಸೆ, ಪ್ರಲ್ಹಾದ್, ಶಿವಕಾಂತ ಜೋಶಿ, ಅರ್ಜುನ ಹಾಗೂ ಜಗನ್ನಾಥ ಚಿಟ್ಮೆ ಅವರಿಗೆ ಸೇರಿದ ಬಾಂಡೆ ಅಂಗಡಿಗಳಿಗೆ ಮೊದಲು ಬೆಂಕಿ ಆವರಿಸಿದೆ. ಇದರಿಂದಾಗಿ ಅಂಗಡಿಯಲ್ಲಿದ್ದ ಲೋಹದ ಪಾತ್ರೆಗಳು, ತಾಮ್ರ, ಹಿತ್ತಾಳೆ, ಸ್ಟೀಲ್, ಅಲ್ಯೂಮಿನಿಯಂ ಸೇರಿದಂತೆ ಎಲ್ಲಾ ಗೃಹಬಳಕೆಯ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಅಲ್ಲದೆ, ಶಿವಶಂಕರ ಮೀಸೆ ಅವರ ಹಾರ್ಡ್ವೇರ್ ಅಂಗಡಿ, ಮಹಮ್ಮದ್ ಲಾಲ್ಅಹ್ಮದ್ ಅವರ ತರಕಾರಿ ಅಂಗಡಿ, ಸುನೀಲ ಜೋಶಿ ಅವರ ಫರ್ನಿಚರ್ ಮಳಿಗೆ, ತಾನಾಜಿ ಫುಟವೇರ್ ಹಾಗೂ ಸತೀಶ ಮತ್ತು ಬಾಲಾಜಿ ಅವರಿಗೆ ಸೇರಿದ ಕಿರಾಣಿ ಅಂಗಡಿಗಳು ಸಹ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕರಕಲಾಗಿವೆ.

ಅಂಗಡಿಗಳಿಗೆ ಬೆಂಕಿ ಹತ್ತಿದ್ದನ್ನು ಗಮನಿಸಿದ ತಕ್ಷಣ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಸ್ಥಳಕ್ಕೆ ಬಂದ ಒಂದು ಅಗ್ನಿಶಾಮಕ ವಾಹನದಲ್ಲಿ ನೀರು ಬೇಗನೆ ಖಾಲಿಯಾಗಿದೆ. ಮತ್ತೊಮ್ಮೆ ನೀರು ತುಂಬಿಸಿಕೊಂಡು ಬರುವಷ್ಟರಲ್ಲಿ ಬೆಂಕಿ ವ್ಯಾಪಿಸಿ ಎಲ್ಲಾ ಅಂಗಡಿಗಳು ಸುಟ್ಟು ಹೋಗಿದ್ದವು. ಅಗ್ನಿಶಾಮಕ ದಳದ ಈ ಅಸಮರ್ಪಕ ಸಿದ್ಧತೆಯೇ ಇಷ್ಟೊಂದು ದೊಡ್ಡ ಮಟ್ಟದ ಹಾನಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಮಹೇಶ್ ಪಾಟೀಲ ಹಾಗೂ ಸಿಪಿಐ ರಘುವೀರಸಿಂಗ್ ಠಾಕೂರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತ ವ್ಯಾಪಾರಿಗಳಿಗೆ ಸಾಂತ್ವನ ಹೇಳಿದ ಅಧಿಕಾರಿಗಳು, ನಷ್ಟದ ಅಂದಾಜು ಮಾಡುವಂತೆ ಸೂಚಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಕಿ ಆಕಸ್ಮಿಕಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !