ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಆರೋಪಿ ಗಿರೀಶ್‌ಗೆ ಜೂನ್ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಹುಬ್ಬಳ್ಳಿಯ 3ನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ್ದರು. ಹೀಗಾಗಿ ಜೂನ್ 16ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಸೂಚಿಸಿದೆ.
ಮೇ 23 ರಿಂದ ಎಂಟು ದಿನಗಳ ಕಾಲ ಗಿರೀಶನನ್ನು ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ ನೀಡಲಾಗಿತ್ತು. ಕಳೆದ ಎಂಟು ದಿನಗಳಿಂದ ಸಿಐಡಿ ಕಸ್ಟಡಿಯಲ್ಲಿದ್ದ ಹಂತಕ ಗಿರೀಶ, ವಿಚಾರಣೆ ವೇಳೆ ಸರಿಯಾಗಿ ಸ್ಪಂದಿಸಿರಲಿಲ್ಲ. ಹೀಗಾಗಿ ಮತ್ತೆ ಕೆಲ ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಮನವಿ ಮಾಡಿತ್ತು. ಆದರೆ, ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಈಗಾಗಲೇ ಹತ್ಯೆಗೆ ಬಳಸಲಾಗಿದ್ದ ಚಾಕುವನ್ನು ಸಿಐಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದಾವಣಗೆರೆಯ ಬೊಮ್ಮನಹಳ್ಳಿ ಬಳಿ ರೈಲು ಹಳಿಯ ಪಕ್ಕದಲ್ಲಿ ಚಾಕು ಪತ್ತೆಯಾಗಿತ್ತು.
ಅಂಜಲಿ ಅಂಬಿಗೇರ ಹತ್ಯೆಗೆ ಆರೋಪಿ ಗಿರೀಶ ಬಳಸಿದ್ದ ಚಾಕುವನ್ನು ದಾವಣಗೆರೆ ಬಳಿ ರೈಲಿನಲ್ಲಿ ಮಹಿಳೆಗೆ ಇರಿಯಲು ಕೂಡ ಬಳಸಿದ್ದ. ರೈಲ್ವೆ ಪೊಲೀಸರು, ರೈಲ್ವೆ ಕೀ ಮ್ಯಾನ್‌ಗಳ ಜತೆಗೂಡಿ ಹುಡುಕಾಟ ನಡೆಸಿದಾಗ ಚಾಕು ಪತ್ತೆಯಾಗಿತ್ತು.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ (Neha Hiremath murder) ಕೊಲೆ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ಕೊಲೆ ಮೇ 15ರಂದು ನಡೆದಿತ್ತು. ನಗರದ ವೀರಾಪೂರ ಓಣಿಯ ಮನೆಯಲ್ಲಿ ಮಲಗಿದ್ದಾಗ ಮನೆಗೇ ನುಗ್ಗಿದ್ದ ದುಷ್ಕರ್ಮಿ ಚಾಕುವಿನಿಂದ ಯುವತಿ ಅಂಜಲಿ ಅಂಬಿಗೇರಗೆ (20) ಇರಿದು ಕೊಂದಿದ್ದನು .