ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹಂತಕ್ಕೆ ಇಸ್ರೋ ಕಾಲಿಡಲು ಸಜ್ಜಾಗಿದೆ. ಪಿಎಸ್‌ಎಲ್‌ವಿ–ಸಿ62 ರಾಕೆಟ್ ಉಡಾವಣೆಗೆ ಮುನ್ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ವಿ. ನಾರಾಯಣನ್ ಅವರು ಶನಿವಾರ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮುಂದಿನ ಮಿಷನ್ ಯಶಸ್ವಿಯಾಗಲಿ ಎಂಬ ಸಂಕಲ್ಪದೊಂದಿಗೆ ಅವರು ದೇವರ ಆಶೀರ್ವಾದ ಪಡೆದಿದ್ದಾರೆ. ಇಸ್ರೋ ಜನವರಿ 12ರಂದು ಬೆಳಿಗ್ಗೆ 10:17ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಪಿಎಸ್‌ಎಲ್‌ವಿ–ಸಿ62 ಮಿಷನ್ ಅನ್ನು ಉಡಾವಣೆ ಮಾಡಲು ಸಿದ್ಧವಾಗಿದೆ. ಇದು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನ 64ನೇ ಉಡಾವಣೆಯಾಗಿದ್ದು, ಎರಡು ಸ್ಟ್ರಾಪ್-ಆನ್ ಬೂಸ್ಟರ್‌ಗಳನ್ನು ಹೊಂದಿರುವ ಪಿಎಸ್‌ಎಲ್‌ವಿ–ಡಿಎಲ್ ರೂಪಾಂತರದ ಐದನೇ ಹಾರಾಟವಾಗಲಿದೆ.
ಇದನ್ನೂ ಓದಿ: FOOD | ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ನವಾಬಿ ಪನೀರ್! ರೆಸಿಪಿ ಇಲ್ಲಿದೆ
ಈ ಮಿಷನ್‌ನ ಮುಖ್ಯ ಪೇಲೋಡ್ EOS-N1 (ಅನ್ವೇಷ) ಭೂ ವೀಕ್ಷಣಾ ಉಪಗ್ರಹವಾಗಿದ್ದು, ಕೃಷಿ, ನಗರ ಯೋಜನೆ ಹಾಗೂ ಪರಿಸರ ಮೇಲ್ವಿಚಾರಣೆಯಲ್ಲಿನ ಭಾರತದ ರಿಮೋಟ್ ಸೆನ್ಸಿಂಗ್ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಲಿದೆ. ಇದರೊಂದಿಗೆ ಭಾರತ ಹಾಗೂ ವಿದೇಶಗಳ ಒಟ್ಟು 18 ಪೇಲೋಡ್‌ಗಳನ್ನು ಒಂದೇ ವೇಳೆ ಕಕ್ಷೆಗೆ ನಿಯೋಜಿಸುವ ಯೋಜನೆಯೂ ಇದೆ.

