ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಿದ್ದ ಟೀಂ ಇಂಡಿಯಾಗೆ ಮೊದಲ ದಿನವೇ ದೊಡ್ಡ ಹೊಡೆತ ಎದುರಾಗಿದೆ. ತಂಡದ ಪ್ರಮುಖ ವಿಕೆಟ್‌ಕೀಪರ್–ಬ್ಯಾಟರ್ ರಿಷಭ್ ಪಂತ್ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಸರಣಿಯಿಂದಲೇ ಹೊರಗುಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಸರಣಿ ಆರಂಭಕ್ಕೂ ಮುನ್ನ ಬಂದ ಈ ಬೆಳವಣಿಗೆ ಭಾರತೀಯ ತಂಡದಲ್ಲಿ ಆತಂಕ ಮೂಡಿಸಿದೆ.
ತರಬೇತಿ ಅವಧಿಯಲ್ಲಿ ಥ್ರೋಡೌನ್ ಅಭ್ಯಾಸದ ವೇಳೆ ಡಿಫೆನ್ಸ್ ಮಾಡಲು ಪ್ರಯತ್ನಿಸಿದಾಗ ಚೆಂಡು ಪಂತ್ ಬೆನ್ನಿಗೆ ತಗುಲಿದೆ. ತಕ್ಷಣವೇ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಸಹಾಯಕ ಸಿಬ್ಬಂದಿ ಮೈದಾನಕ್ಕೆ ಧಾವಿಸಿ ಅವರ ಸ್ಥಿತಿಯನ್ನು ಪರಿಶೀಲಿಸಿದರು. ವೈದ್ಯಕೀಯ ತಂಡ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಪಂತ್ ಕ್ರೀಡಾಂಗಣದಿಂದ ಹೊರನಡೆದರು.
ಇದನ್ನೂ ಓದಿ: Food | ದೇವಿಗೆ ಇಷ್ಟವಾದ ಕ್ಷೀರಾನ್ನ ಮಾಡೋದು ಹೇಗೆ ಗೊತ್ತಿದ್ಯಾ? ಇಲ್ಲಿದೆ ರೆಸಿಪಿ
ಈಗಾಗಲೇ ಕೆಎಲ್ ರಾಹುಲ್ ಏಕದಿನ ತಂಡದಲ್ಲಿ ವಿಕೆಟ್‌ಕೀಪರ್ ಆಯ್ಕೆಯಾಗಿ ಇದ್ದಾರೆ. ಪಂತ್ ಬದಲಿಗೆ ಯಾರು ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂಬುದನ್ನು ಬಿಸಿಸಿಐ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. 2026ರ ಟಿ20 ವಿಶ್ವಕಪ್ ತಂಡದಲ್ಲಿರುವ ಇಶಾನ್ ಕಿಶನ್‌ಗೆ ಅವಕಾಶ ಸಿಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಪಂತ್ ಕೊನೆಯದಾಗಿ ಜುಲೈ 2024ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯ ಆಡಿದ್ದರು. 2025–26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಿ ಎರಡು ಅರ್ಧಶತಕಗಳನ್ನೂ ಗಳಿಸಿದ್ದರು. ಇದೀಗ ಅವರ ಗಾಯದ ತೀವ್ರತೆ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ವ್ಯಕ್ತವಾಗಿದೆ.

